
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗರ್ಭಿಣಿ ಶಿಕ್ಷಕಿ ತೀವ್ರ ರಕ್ತಸ್ರಾವದಿಂದಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೊಸನಗರ ತಾಲೂಕಿನ ನಗರದ ಅಮೃತ ವಿದ್ಯಾಲಯದ ಶಿಕ್ಷಕಿ ಅಶ್ವಿನಿ(27) ಮೃತಪಟ್ಟ ಶಿಕ್ಷಕಿ. ಅವರು ಗರ್ಭಿಣಿಯಾಗಿದ್ದು, ಜನವರಿ 26ರಂದು ಭಾನುವಾರ ರಕ್ತಸ್ರಾವವಾಗಿದ್ದರಿಂದ ಸೋಮವಾರ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಶ್ವಿನಿ ಅವರಿಗೆ ಗರ್ಭಪಾತವಾಗಿ ತೀವ್ರ ರಕ್ತಸ್ರಾವವಾಗಿದ್ದು, ಈ ವೇಳೆ ವೈದ್ಯರು ಏನು ಆಗುವುದಿಲ್ಲ. ಡಿಸ್ಚಾರ್ಜ್ ಮಾಡುತ್ತೇವೆ. ಮನೆ ಹೋಗಬಹುದು ಎಂದು ಹೇಳಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.
ಬಳಿಕ ಅಶ್ವಿನಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಎಂಸಿಎ ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದ ಅಶ್ವಿನಿ ನಗರದ ಅಮೃತ ವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ನಗರ ಪೊಲೀಸ್ ಠಾಣೆಯಲ್ಲಿ ಅವರ ತಂದೆ ರಮೇಶ್ ದೂರು ದಾಖಲಿಸಿದ್ದಾರೆ.