15 ವರ್ಷದ ಬಾಲಕಿಯೊಬ್ಬಳು ಗರ್ಭಪಾತದ ಮಾತ್ರೆ ಸೇವಿಸಿ ಪ್ರಾಣ ಕಳೆದುಕೊಂಡಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಚೆಂಗಂ ಬಳಿ ನಡೆದಿದೆ.
ಮೃತರಾದವರು ಗರ್ಭಿಣಿಯಾಗಿದ್ದರು. ಮುರುಗನ್ ಎಂಬಾತ ಬಾಲಕಿಯನ್ನು ಪ್ರತಿನಿತ್ಯ ಶಾಲೆಗೆ ಬಿಡುತ್ತಿದ್ದನು. ಹೀಗೆ ಅವರಿಬ್ಬರು ದೈಹಿಕ ಸಂಬಂಧ ಬೆಳೆಸಿಕೊಂಡಿದ್ದರು.
ಬಾಲಕಿ ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದು, ಮುರುಗನ್ ತನ್ನ ಸ್ನೇಹಿತ ಪ್ರಭು ಎಂಬಾತನ ನೆರವಿನೊಂದಿಗೆ ಗರ್ಭಪಾತದ ಮಾತ್ರೆ ಖರೀದಿಸುವ ಮಾರ್ಗ ಕಂಡುಕೊಂಡಿದ್ದನು.
ಶಾಲೆಗೆ ಕರೆದುಕೊಂಡು ಹೋಗುವ ನೆಪದಲ್ಲಿ ಬಾಲಕಿಯನ್ನು ಆಕೆಯ ಮನೆಯಿಂದ ಕರೆತಂದು ದಾರಿ ಮಧ್ಯೆ ಗರ್ಭಪಾತದ ಮಾತ್ರೆ ಸೇವಿಸುವಂತೆ ಒತ್ತಾಯ ಮಾಡಿದ್ದಾರೆ.
ಬಳಿಕ ಆಕೆ ಶಾಲೆಯ ಕಡೆಗೆ ಹೋಗಲು ಅನುವಾಗುತ್ತಿದ್ದಂತೆ ಇದ್ದಕ್ಕಿದ್ದಂತೆ ಪ್ರಜ್ಞೆ ಕಳೆದುಕೊಂಡಳು. ನಂತರ ಮುರುಗನ್ ಬಾಲಕಿಯನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆಸ್ಪತ್ರೆಯ ವೈದ್ಯರು ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದರು. ನಂತರ ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಬಾಲಕಿಯ ತಂದೆ ನೀಡಿದ ದೂರಿನ ಆಧಾರದ ಮೇಲೆ ಮುರುಗನ್ ಹಾಗೂ ಆತನ ಸ್ನೇಹಿತ ಪ್ರಭುನನ್ನು ಬಂಧಿಸಲಾಗಿದೆ. ಮುರುಗನ್ ವಿರುದ್ಧ ಪೋಕ್ಸೋ ಕಾಯ್ದೆಯಡಿಯೂ ಪ್ರಕರಣ ದಾಖಲಿಸಲಾಗಿದೆ. ಗರ್ಭಪಾತದ ಮಾತ್ರೆ ನೀಡಿದವನಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.