
ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದವರ ಸಂಖ್ಯೆ 50 ಕೋಟಿ ದಾಟಿ ಹೊಸ ದಾಖಲೆ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ನದಿಯ ನೀರು ಅತ್ಯಂತ ಕಲುಷಿತವಾಗಿದ್ದು, ಸ್ನಾನಕ್ಕೂ ಯೋಗ್ಯವಲ್ಲ ಎನ್ನುವ ಆಘಾತಕಾರಿ ವರದಿ ಬಹಿರಂಗವಾಗಿದೆ.
ಮಲದಲ್ಲಿ ಕಂಡುಬರುವ ಬ್ಯಾಕ್ಟೀರಿಯಾಗಳ ಸಂಖ್ಯೆ ನೀರಿನಲ್ಲಿ ಅತ್ಯಂತ ಅಪಾಯಕಾರಿ ಮಟ್ಟದಲ್ಲಿದೆ ಎನ್ನುವುದು ಗೊತ್ತಾಗಿದೆ. ತ್ರಿವೇಣಿ ಸಂಗಮ ಸೇರಿ ಪ್ರಯಾಗ್ ರಾಜ್ ನ ವಿವಿಧ ಪ್ರದೇಶಗಳಿಂದ ಸಂಗ್ರಹಿಸಿದ ನೀರಿನ ಮಾದರಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪರೀಕ್ಷೆಗೆ ಒಳಪಡಿಸಿ ಈ ವಿಷಯವನ್ನು ದೃಢಪಡಿಸಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯವರು ನೀರಿನ ಗುಣಮಟ್ಟ ಕುರಿತ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧಿಕಾರಣಕ್ಕೆ ಸಲ್ಲಿಸಿದ್ದು, ನ್ಯಾಯಾಧಿಕರಣ ಈ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಾತ್ರವಲ್ಲ, ಉತ್ತರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದು, ಕಲುಷಿತ ನೀರಿನಲ್ಲಿ 50 ಕೋಟಿ ಜನ ಸ್ನಾನ ಮಾಡುವಂತೆ ಮಾಡಿದ್ದೀರಿ. ಸ್ನಾನಕ್ಕೂ ಯೋಗ್ಯವಲ್ಲದ ನೀರನ್ನು ಜನ ಕುಡಿಯಲು ಬಳಸಬೇಕೇ ಎಂದು ತರಾಟೆಗೆ ತೆಗೆದುಕೊಂಡಿದ್ದು, ವಿಸ್ತೃತ ವರದಿ ಸಲ್ಲಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.