ಕೃಷ್ಣನಗರಿ ಉಡುಪಿಯಿಂದ 11 ಕಿಮಿ ದೂರದಲ್ಲಿರುವ ಕುಂಜಾರು ಗಿರಿಗೆ ದುರ್ಗಾಪರಮೇಶ್ವರಿಯೇ ಒಡತಿ. ಇಲ್ಲಿನ ಕುರ್ಕಾಲು ಗ್ರಾಮದಲ್ಲಿರುವ ಪುಟ್ಟಹಳ್ಳಿ ಕುಂಜಾರು. ಎತ್ತರದ ಬೆಟ್ಟದ ಮೇಲೆ ನೆಲೆಸಿದ ದುರ್ಗೆ ಭಕ್ತರ ಬೇಡಿಕೆಗಳನ್ನೆಲ್ಲಾ ಪೂರೈಸುತ್ತಾಳೆ.
ಈ ಎತ್ತರದ ಬೆಟ್ಟವು ದೂರದಿಂದ ನೋಡುವಾಗ ಕುಂಜರ ಅಂದರೆ ಆನೆಯಂತೆ ಕಾಣುವುದರಿಂದ ಇಲ್ಲಿಗೆ ಕುಂಜಾರುಗಿರಿ ಎಂಬ ಹೆಸರು ಬಂದಿದೆ. ಪರಶುರಾಮ ಇಲ್ಲಿ ದುರ್ಗೆಯ ಪ್ರತಿಷ್ಠೆ ಮಾಡಿದಾಗ ದೇವತೆಗಳು ವಿಮಾನವನ್ನೇರಿ ಬಂದು ಇಲ್ಲಿ ಹೂ ಮಳೆಗೈದುದರಿಂದ ಇಲ್ಲಿಗೆ ವಿಮಾನಗಿರಿ ಎಂಬ ಹೆಸರೂ ಇದೆ.
ಮಕ್ಕಳಾಗದ ದಂಪತಿಗಳು ಇಲ್ಲಿ ಬಂದು ಬೇಡಿಕೊಂಡರೆ ಸಂತಾನಭಾಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತರಲ್ಲಿದೆ. ಹಾಗಾಗಿ ಮಗುವಾದ ಬಳಿಕ ಬೆಳ್ಳಿಯ ಇಲ್ಲವೇ ಬಂಗಾರದ ಪುಟಾಣಿ ತೊಟ್ಟಿಲು ಮಗುವಿನ ರೂಪವನ್ನು ಹರಕೆಯ ರೂಪದಲ್ಲಿ ತೀರಿಸುತ್ತಾರೆ. ನವರಾತ್ರಿ ಸಂದರ್ಭದಲ್ಲಿ ವಿಜೃಂಭಣೆಯಿಂದ ನಡೆಯುವ ಉತ್ಸವದಲ್ಲಿ ಪಾಲ್ಗೊಂಡ ಪ್ರತಿ ಹೆಣ್ಣು ಮಗುವೂ ಕನ್ನಿಕೆಯಾಗಿ ಪೂಜಿಸಲ್ಪಡುತ್ತಾಳೆ. ಇಲ್ಲಿ ನೆಲೆಸಿದ ದುರ್ಗೆ ಬಾಲೆಯಾಗಿರುವುದು ಇದಕ್ಕೆ ಮುಖ್ಯ ಕಾರಣ.
ಎತ್ತರದಲ್ಲಿ ನಿಂತು ನಿಸರ್ಗದ ಸೊಬಗನ್ನೂ ಇಲ್ಲಿ ಸವಿಯಬಹುದು. ಮಧ್ವಾಚಾರ್ಯರು ಜನಿಸಿದ ಪಾಜಕ ಕ್ಷೇತ್ರ ಇಲ್ಲೇ ಒಂದು ಕಿ.ಮಿ. ವ್ಯಾಪ್ತಿಯೊಳಗಿದೆ. ಮೆಟ್ಟಿಲು ಹತ್ತಿ ದೇವಸ್ಥಾನವನ್ನು ತಲುಪಬಹುದು. ಹಾಗಿದ್ದರೆ ತಡಮಾಡಬೇಡಿ. ನೀವೂ ದುರ್ಗೆ ಶುಭಾಶೀರ್ವಾದ ಪಡೆದುಕೊಳ್ಳಿ.