ಬೆಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಖಂಡಿಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ತಾರ್ಕಿಕ ಅಂತ್ಯ ಹಾಡಬೇಕಿದೆ. ಕಾರ್ಯಕರ್ತರ ಕಿಚ್ಚು ಸಂಯಮದ ಎಲ್ಲೆ ಮೀರದಿರಲಿ. ನಿಮ್ಮ ನೋವಲ್ಲಿ ಪಕ್ಷದ ಪ್ರತಿ ನಾಯಕರು ಜೊತೆಗಿದ್ದಾರೆ. ಪ್ರವೀಣ್ ಕುಟುಂಬದವರೊಂದಿಗೆ ನಾವೆಲ್ಲರೂ ಇದ್ದು ಆ ಕುಟುಂಬಕ್ಕೆ ನೈತಿಕ ಧೈರ್ಯ ತುಂಬೋಣ. ಪೊಲೀಸರ ತನಿಖೆಗೆ ಪೂರಕ ಸಹಕಾರ ನೀಡೋಣ ಎಂದು ಟ್ವಿಟರ್ ನಲ್ಲಿ ಕಾರ್ಯಕರ್ತರಿಗೆ ವಿಜಯೇಂದ್ರ ಮನವಿ ಮಾಡಿದ್ದಾರೆ.
ಪ್ರವೀಣ್ ಹತ್ಯೆಯನ್ನು ಖಂಡಿಸಿರುವ ಅವರು, ಕಾರ್ಯಕರ್ತರೇ ಪಕ್ಷದ ಆಧಾರ ಸ್ತಂಭವೆಂದು ಬಿಜೆಪಿ ನಂಬಿದೆ. ಪ್ರತಿ ಕಾರ್ಯಕರ್ತನೂ ತನ್ನ ಕುಟುಂಬದ ಸದಸ್ಯರೆಂದು ಪರಿಗಣಿಸುತ್ತದೆ. ಕಾರ್ಯಕರ್ತರ ಕೊಲೆ ವಿಚಾರವನ್ನು ಹಗುರವಾಗಿ ತೆಗೆದುಕೊಂಡಿಲ್ಲ. ಕಾರ್ಯಕರ್ತರ ಪ್ರಾಣಕ್ಕೆ ಬೆಲೆ ಕಟ್ಟಲಾಗದು. ಕ್ರಿಮಿನಲ್ ಗಳನ್ನು ಬೇರು ಸಹಿತ ಕಿತ್ತೊಗೆಯುವವರೆಗೂ ವಿರಮಿಸುವುದಿಲ್ಲ. ನಮ್ಮದೇ ಸರ್ಕಾರ ಇದೆ ವಿಶ್ವಾಸವಿಡಿ ಎಂದು ಟ್ವೀಟ್ ಮಾಡಿದ್ದಾರೆ.