ಮೈಸೂರು: ನಾಡ ಹಬ್ಬ, ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆಗೆ ದಿನಗಣನೆ ಆರಂಭವಾಗಿದೆ. ಇನ್ನೊಂದೆಡೆ ಮಹಿಷ ದಸರಾ ಸಮಿತಿ ಈ ಬಾರಿ ಮಹಿಷ ಮಂಡಲೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದು, ಇದು ಚರ್ಚೆಗೆ ಕಾರಣವಾಗಿದೆ.
ಸೆಪ್ಟೆಂಬರ್ 29 ರಂದು ಮಹಿಷ ದಸರಾ ಮಾಡುತ್ತೇವೆ ಎಂದು ಮಹಿಷ ದಸರಾ ಆಚರಣಾ ಸಮಿತಿ ಹೇಳಿದ್ದು, ಚಾಮುಂಡಿ ಬೆಟ್ಟದಲ್ಲಿನ ಮಹಿಷ ಮೂರ್ತಿಗೆ ಪುಷ್ಪಾರ್ಚನೆ ಮಾಡಿ ಮಹಿಷ ದಸರಾ ಮಾಡಲಾಗುವುದು ಎಂದು ತಿಳಿಸಿದೆ. ಆದರೆ ಈ ಬಾರಿಯಿಂದ ಮಹಿಷ ದಸರಾ ಬದಲು ‘ಮಹಿಷ ಮಂಡಲೋತ್ಸವ’ ಎಂದು ಹೊಸ ಹೆಸರು ಇಟ್ಟು ಪೂಜಿಸಲಾಗುವುದು ಎಂದು ಹೇಳಿದೆ.
ಮಹಿಷ ದಸರಾ ಆಚರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಿಸಲು ಬಿಡಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ಅವರು ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಿಸಲು ಮುಂದಾದರೆ ನಾವು ಕೂಡ ‘ಚಾಮುಂಡಿ ಚಲೋ’ ಹೋರಾಟ ಕೈಗೊಳ್ಳುತ್ತೇವೆ. ನಾವಾ ಅವರಾ ನೋಡೇಬಿಡೋಣ ಎಂದು ತಿಳಿಸಿದ್ದಾರೆ. ಮಹಿಷ ದಸರಾ ಆಚರಿಸಿದ್ದೇ ಆದರೆ ಚಾಮುಂಡಿ ಚಲೋ ನಡೆಸಲಾಗುವುದು ಎಂದು ಪ್ರತಾಪ್ ಸಿಂಹ ಇದೇ ವೇಳೆ ಕರೆ ನೀಡಿದ್ದಾರೆ.