ಮೈಸೂರು: ಎರಡು ತಿಂಗಳ ಹಿಂದೆಯೇ ಸಿಎಂ ಸಿದ್ದರಾಮಯ್ಯನವರಿಗೆ ನಾನು ಹೇಳಿದ್ದೆ. 14 ನಿವೇಶನಗಳನ್ನು ಮುಡಾಗೆ ವಾಪಾಸ್ ಕೊಟ್ಟುಬಿಡಿ ಎಂದು. ಅಂದೇ ನಿವೇಶನ ವಾಪಾಸ್ ಕೊಟ್ಟಿದ್ದರೆ. ಇಂದು ಇಲ್ಲಿಯವರೆಗೆ ಬಂದು ನಿಲ್ಲುತ್ತಿರಲಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ಅವರು ಇಷ್ಟು ವರ್ಷಗಳ ರಾಜಕೀಯದಲ್ಲಿ ಯಾವುದೇ ಕಂಳಂಕ ಹೊತ್ತವರಲ್ಲ. ಅವರ ಇಷ್ಟುವರ್ಷಗಳ ರಾಜಕೀಯ ಜೀವನವನ್ನು 14 ಸೈಟ್ ಗಳು ನುಂಗುವಂತಾಗಬಾರದು ಹಾಗಾಗಿ ಈ ಹಿಂದೆಯೇ ನಾನು ಅವರಿಗೆ ಸೈಟ್ ವಾಪಾಸ್ ಕೊಡಿ ಎಂದಿದ್ದೆ. ಅಂದೇ ಕೊಟ್ಟಿದ್ದರೆ ಇವತ್ತು ಪ್ರಾಸಿಕ್ಯೂಷನ್, ಕೇಸ್ ಏನೂ ಆಗುತ್ತಿರಲಿಲ್ಲ ಎಂದರು.
ಈಗ ಒಡವೆ ಕದ್ದ ಕಳ್ಳ ಒಡವೆ ವಾಪಾಸ್ ಕೊಟ್ಟರೆ ಕೇಸ್ ಮುಗಿಯತ್ತಾ? ಇಲ್ಲವಲ್ಲಾ. ಈಗ ತನಿಖೆ ಎದುರಿಸಲೇಬೇಕು. ಸಿಎಂ ಸಿದ್ದರಾಮಯ್ಯ ಅಂದು ತಾವು ಸೈಟ್ ಯಾಕೆ ವಾಪಾಸ್ ಕೊಡಬೇಕು? 64 ಕೋಟಿ ಹಣ ಕೊಡ್ತಾರಾ? ಎಂದು ಕೇಳಿದ ದಿನವೇ ಅವರ ಮೇಲಿನ ಗೌರವ, ವಿಶ್ವಾಸ ನೆಲಕಚ್ಚಿತು. ಈಗ ಸೈಟ್ ವಾಪಸ್ ಕೊಟ್ಟರೂ ಅಷ್ಟೇ, ಬಿಟ್ಟರೂ ಅಷ್ಟೇ ತನಿಖೆಯಾಗಲೇಬೇಕು. ಮೊದಲು ಸಿದ್ದರಾಮಯ್ಯನವರು ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.
ಈಗ ಸಿಎಂ ಪತ್ನಿಯ ಭಾವನಾತ್ಮಕ ಕಾರ್ಡ್ ಕೆಲಸ ಮಾಡಲ್ಲ. ಸಿಎಂ ಪತ್ನಿ ಪಾರ್ವತಿ ಅವರಿಗೆ ತಮ್ಮ ಪತಿ ತಪಸ್ಸಿನ ರೀತಿಯ ರಾಜಕಾರಣಿ ಎಂದು ಸೈಟ್ ಪಡೆಯುವಾಗ ಗೊತ್ತಿರಲಿಲ್ಲವೇ? ಪತಿಯ ಕಳಂಕರಹಿತ ರಾಜಕಾರಣಕ್ಕಿಂತ ಸೈಟೇ ಮುಖ್ಯ ಎಂದು ಇಷ್ಟು ದಿನ ಕುಳಿತಿದ್ದು ದೊಡ್ಡ ತಪ್ಪು. ಈಗ ಸೈಟ್ ವಾಪಾಸ್ ಕೊಡುವುದಾಗಿದ್ದರೆ ಹೈಕೊರ್ಟ್ ನಲ್ಲಿ ಹೋರಾಟ ಮಾಡಿದ್ದು ಯಾಕೆ? ಎಂದು ಪ್ರಶ್ನಿಸಿದ್ದಾರೆ.