ಮೈಸೂರು: ಮೈಸೂರು-ರಾಮೇಶ್ವರಂ ನೂತನ ರೈಲಿಗೆ ಚಾಲನೆ ನೀಡಿದ ಸಂಸದ ಪ್ರತಾಪ್ ಸಿಂಹ, ನನ್ನ ಮೇಲೆ ಪ್ರೀತಿ ಇಟ್ಟು ಇಲ್ಲಿನ ಜನ ಗೆಲ್ಲಿಸಿದ್ದಕ್ಕೆ ಇಷ್ಟೆಲ್ಲ ಕೆಲಸಗಳನ್ನು ಮಾಡಿದ್ದೇನೆ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಪಕ್ಷ ನನ್ನ ಕೈಬಿಡಲ್ಲ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಈ ಬಾರಿಯೂ ಟಿಕೆಟ್ ಸಿಗುವ ವಿಶ್ವಾಸವಿದೆ. ಅಂತಿಮವಾಗಿ ಹೈಕಮಾಂಡ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ವರಿಷ್ಠರು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ನಾನು ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದಾಗಲೂ ನರೇಂದ್ರ ಮೋದಿ ಹೆಸರಲ್ಲಿ ಗೆದ್ದಿದ್ದೆ. ಎರಡನೇ ಬಾರಿ ಸ್ಪರ್ಧಿಸಿದಾಗಲೂ ಮೋದಿ ಹೆಸರಲ್ಲಿ ಗೆದ್ದಿದ್ದೇನೆ. ಮೂರನೇ ಬಾರಿಯೂ ಮೋದಿ ಹೆಸರಲ್ಲೇ ಚುನಾವಣೆ ಎದುರಿಸಿ ಜಯಗಳಿಸುತ್ತೇನೆ. ಪಕ್ಷದ ವಿಶ್ವಾಸ ನನ್ನ ಮೇಲಿದೆ ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಬಿಜೆಪಿ ಗೆಲ್ಲುವ ಪರಿಸ್ಥಿತಿಯನ್ನು ನಾನು ಸೃಷ್ಟಿ ಮಾಡಿದ್ದೇನೆ. ನನಗೆ ತಾಯಿ ಚಾಮುಂಡಿ, ಪ್ರಧಾನಿ ಮೋದಿ ಆಶೀರ್ವಾದವಿದೆ ಎಂದು ಹೇಳಿದ್ದಾರೆ.