ಮೈಸೂರು: ಲೋಕಸಭೆ ಸದಸ್ಯ ಪ್ರತಾಪ್ ಸಿಂಹ ಅವರ ಪಾಸ್ ಪಡೆದು ಸಂಸತ್ ಭವನಕ್ಕೆ ನುಗ್ಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರಿನ ಜಲದರ್ಶಿನಿ ಮುಂಭಾಗದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಎದುರು ಜಮಾವಣೆಗೊಂಡ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಅವರನ್ನು ತಡೆದಿದ್ದಾರೆ. ಕಾಂಪೌಂಡ್ ಹಾರಿ ಹಲವರು ಪ್ರತಾಪ್ ಸಿಂಹ ಅವರ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದು, ಮತ್ತೆ ಕೆಲವರು ಮೈಸೂರು -ಮಡಿಕೇರಿ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದ ಪೊಲೀಸರು ಕೊನೆಗೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ. ಮುಂಜಾಗ್ರತೆ ಕ್ರಮವಾಗಿ ಜಲದರ್ಶಿನಿ ಅತಿಥಿಗೃಹದ ಬಳಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.