
ಮೈಸೂರು: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ -ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಅಲರ್ಟ್ ಆದ ಸಂಸದ ಪ್ರತಾಪ್ ಸಿಂಹ ಅವರು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.
ದೇವೇಗೌಡರಿಗೆ ಮಂಡಿಯೂರಿ ನಮಸ್ಕರಿಸಿದ ಪ್ರತಾಪ್ ಸಿಂಹ ಆಶೀರ್ವಾದ ಪಡೆದುಕೊಂಡಿದ್ದಾರೆ. ಭಾನುವಾರ ಆದಿಚುಂಚನಗಿರಿ ಶಾಖಾ ಮಠಕ್ಕೆ ದೇವೇಗೌಡರು ಭೇಟಿ ನೀಡಿದ ವೇಳೆ ಪ್ರತಾಪ್ ಸಿಂಹ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆದಿಚುಂಚನಗಿರಿ ಶ್ರೀಗಳು, ಜಿ.ಟಿ. ದೇವೇಗೌಡ ಅವರು ಇದ್ದರು.
ಮೈಸೂರು, ಕೊಡಗು ಕ್ಷೇತ್ರದಲ್ಲಿ ಒಕ್ಕಲಿಗರು ಪ್ರಾಬಲ್ಯ ಹೊಂದಿದ್ದು, ಈಗಿನಿಂದಲೇ ಜೆಡಿಎಸ್ ಮತ ಬ್ಯಾಂಕ್ ಗೆ ಪ್ರತಾಪ್ ಸಿಂಹ ಕೈ ಹಾಕಿದ್ದಾರೆ. ಜೆಡಿಎಸ್ ನಾಯಕರೊಂದಿಗೆ ಪ್ರತಾಪ್ ಸಿಂಹ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಮೈಸೂರು ಭಾಗದ ಜೆಡಿಎಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಪ್ರತಾಪ್ ಸಿಂಹ ಹ್ಯಾಟ್ರಿಕ್ ಗೆಲುವಿಗೆ ರಣತಂತ್ರ ಹೆಣೆಯುತ್ತಿದ್ದಾರೆ.