ಕೋಲಾರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನಲ್ಲಿ ಹೊಸ ವರ್ಷದ ಮೊದಲ ದಿನ ದೇವರ ಪ್ರಸಾದ ಸೇವಿಸಿದ 19 ಮಕ್ಕಳು ಸೇರಿ 53 ಭಕ್ತರು ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆ ಬಳಿಕ ಅಸ್ವಸ್ಥರಾಗಿದ್ದ ಎಲ್ಲರ ಆರೋಗ್ಯ ಸ್ಥಿರವಾಗಿದೆ. 17 ಮಂದಿ ಹೊರರೋಗಿಗಳಾಗಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿದ್ದಾರೆ.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ವೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದ ಪ್ರಸಾದ ಸೇವಿಸಿದ ಬಳಿಕ ಭಕ್ತರು ಅಸ್ವಸ್ಥರಾಗಿದ್ದಾರೆ. ಹೊಸವರ್ಷದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ನೆರವೇರಿಸಿ ಭಕ್ತಾದಿಗಳಿಗೆ ಕೇಸರಿಬಾತ್ ಮತ್ತು ಚಿತ್ರಾನ್ನ ವಿತರಿಸಲಾಗಿತ್ತು.
ಪ್ರಸಾದ ಸೇವಿಸಿ ಮನೆಗೆ ಹೋದ ಭಕ್ತರಲ್ಲಿ ಅನೇಕರು ಅಸ್ವಸ್ಥಗೊಂಡಿದ್ದಾರೆ. ಗ್ರಾಮಸ್ಥರು ಕೂಡಲೇ ಆಂಬುಲೆನ್ಸ್ ಮತ್ತು ಇತರೆ ವಾಹನಗಳ ಮೂಲಕ ರಾತ್ರಿ 10 ಗಂಟೆಯ ವೇಳೆಗೆ ಶ್ರೀನಿವಾಸಪುರ ಆಸ್ಪತ್ರೆಗೆ ಅಸ್ವಸ್ಥರನ್ನು ದಾಖಲಿಸಿದ್ದಾರೆ. ವೈದ್ಯರು, ಆಸ್ಪತ್ರೆ ಸಿಬ್ಬಂದಿ ಕೂಡಲೇ ಚಿಕಿತ್ಸೆ ನೀಡಿದ್ದು, ಚಿಕಿತ್ಸೆಯ ಬಳಿಕ ಎಲ್ಲರ ಆರೋಗ್ಯ ಸ್ಥಿರವಾಗಿದೆ. ತಾಲೂಕು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.