ಬೆಂಗಳೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 12 ವರ್ಷದ ಬಾಲಕ ಪರಿಣವ್ ನನ್ನು ಹೈದರಾಬಾದ್ ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು, ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬುಧವಾರ ಬೆಳಿಗ್ಗೆ ಪೊಲೀಸರು ಆತನನ್ನು ಪತ್ತೆಹಚ್ಚಿದ್ದು, ಬಾಲಕ ಸುರಕ್ಷಿತವಾಗಿದ್ದಾನೆ.
ಜನವರಿ 21ರ ಭಾನುವಾರ ವೈಟ್ ಫೀಲ್ಡ್ ನಲ್ಲಿ ಟ್ಯೂಷನ್ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಪರಿಣವ್ ನಾಪತ್ತೆಯಾಗಿದ್ದನು. ಮಾರತ್ತಹಳ್ಳಿ, ಯಮಲೂರು ಮತ್ತು ಮೆಜೆಸ್ಟಿಕ್ ನ ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆತನ ಚಲನವಲನಗಳು ಪತ್ತೆಯಾಗಿತ್ತು.
ಹುಡುಗನ ಬಳಿ ಸ್ವಲ್ಪ ಹಣ ಮಾತ್ರ ಇತ್ತು, ಆದರೆ ಆತ ಹೈದರಾಬಾದ್ ಅನ್ನು ಹೇಗೆ ತಲುಪಿದನು ಎಂಬುದು ಇನ್ನೂ ತಿಳಿದಿಲ್ಲ. ಪೋಷಕರು ಹುಡುಗನೊಂದಿಗೆ ಮಾತನಾಡಿದ್ದು, ಅವನನ್ನು ಕರೆದುಕೊಂಡು ಬರಲು ಹೊರಟಿದ್ದಾರೆ. ಪರಿಣವ್ ತಾಯಿ ನಿವೇದಿತಾ ತಮ್ಮ ಮಗ ಸುರಕ್ಷಿತವಾಗಿದ್ದಾನೆ ಎಂದು ಖಚಿತಪಡಿಸಿದ್ದಾರೆ.