
ಶಿವಮೊಗ್ಗ: ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರು ಶಿವಮೊಗ್ಗ ಪ್ರವೇಶಿಸಿದಂತೆ ತಡೆದು ವಾಪಸ್ ಕಳುಹಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಶಿವಮೊಗ್ಗದಲ್ಲಿ ಮಾರ್ಚ್ 1ರಂದು ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕಾಗಿ ಪ್ರಮೋದ್ ಮುತಾಲಿಕ್ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದರು. ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಅವರನ್ನು ಶಿವಮೊಗ್ಗ ಹೊರವಲಯದ ರಾಗಿಗುಡ್ಡದ ಬಳಿ ತಡೆದು ವಾಪಸ್ ಕಳುಹಿಸಲಾಗಿದೆ. ಫೆಬ್ರವರಿ 28 ರಿಂದ 7 ದಿನಗಳ ಕಾಲ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಜಿಲ್ಲೆ ಪ್ರವೇಶಿಸದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ ಎಂದು ಹೇಳಲಾಗಿದೆ.
ಶ್ರೀರಾಮ ಸೇನೆ ವತಿಯಿಂದ ಪ್ರಕಟಿಸಲಾದ ಲವ್ ಜಿಹಾದ್ ಪುಸ್ತಕ ಬಿಡುಗಡೆಗಾಗಿ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ಇದಕ್ಕೂ ಮುನ್ನ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ನಂತರ ಭದ್ರಾವತಿಯಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಬೇಕಿತ್ತು. ಆದರೆ, ಪ್ರಮೋದ್ ಮುತಾಲಿಕ್ ಶಿವಮೊಗ್ಗ ಪ್ರವೇಶ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಶಿವಮೊಗ್ಗ -ಹೊನ್ನಾಳಿ ರಸ್ತೆಯ ರಾಗಿಗುಡ್ಡ ಕ್ರಾಸ್ ನಲ್ಲಿ ಪ್ರಮೋದ್ ಮುತಾಲಿಕ್ ಅವರ ಕಾರ್ ತಡೆದ ಪೊಲೀಸರು ಆದೇಶ ಪ್ರತಿ ತೋರಿಸಿ ಶಿವಮೊಗ್ಗ ಪ್ರವೇಶಿಸದಂತೆ ಹೇಳಿದ್ದಾರೆ.
ಪ್ರಮೋದ್ ಮುತಾಲಿಕ್ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್.ಎನ್. ಚನ್ನಬಸಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಇ. ಕಾಂತೇಶ್, ದೀನದಯಾಳು, ರಾಜೇಶ್ ಶಾಸ್ತ್ರಿ ಸೇರಿದಂತೆ ಹಲವರು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಸ್ತೆಯಲ್ಲಿಯೇ ಲವ್ ಜಿಹಾದ್ ಪುಸ್ತಕ ಮತ್ತು ಪೋಸ್ಟರ್ ಗಳನ್ನು ಪ್ರಮೋದ್ ಮುತಾಲಿಕ್ ಬಿಡುಗಡೆ ಮಾಡಿ ಕಾರ್ ನಲ್ಲಿಯೇ ಕುಳಿತು ಊಟ ಮಾಡಿದ್ದಾರೆ. ತಡರಾತ್ರಿಯೇ ಪೊಲೀಸರು ಪ್ರಮೋದ್ ಮುತಾಲಿಕ್ ಅವರನ್ನು ಜಿಲ್ಲೆಯ ಗಡಿ ದಾಟಿಸಿದ್ದು, ಎನ್.ಆರ್. ಪುರಕ್ಕೆ ಬಿಡಲಾಗಿದೆ.