ಉಡುಪಿ: ಮಂಗಳೂರು ಪಬ್ ದಾಳಿಕೋರರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದ ಬಗ್ಗೆ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ್ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಪಬ್ ನಲ್ಲಿ ದಾಳಿ ನಡೆಸಿದ್ದ ಬಜರಂಗದಳ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿ ಕ್ರಮ ಕೈಗೊಂಡಿದ್ದೆ ಎಂದು ಆರ್.ಅಶೋಕ್ ವಿಧಾನಸಭೆಯಲ್ಲಿ ಹೇಳಿದ್ದರು. ಇದೇ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಆರ್.ಅಶೋಕ್ ವಿಪಕ್ಷ ನಾಯಕ ಸ್ಥಾನಕ್ಕೆ ಅಯೋಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು ಹಿಂದು ಕಾರ್ಯಕರ್ತರಿಗೆ ಆರ್.ಅಶೋಕ್ ನೀಡಿದ ಕೊಡುಗೆ. ಅವರು ಗೃಹ ಸಚಿವರಾಗಿದ್ದಾಗ ಪಿಎಫ್ ಐ ಗಲಾಟೆ ಮಾಡಿತ್ತು. ಆದರೆ ಆ ಬಗ್ಗೆ ಗೃಹ ಸಚಿವರಾಗಿ ಆರ್.ಅಶೋಕ್ ಒಂದೇ ಒಂದು ಪತ್ರವನ್ನೂ ಕೇಂದ್ರಕ್ಕೆ ಬರೆದಿಲ್ಲ ಎಂದು ಕಿಡಿಕಾರಿದರು.
ಮಂಗಳೂರು ಪಬ್ ಮೇಲೆ ದಾಳಿ ನಡೆಸಿದ್ದು ಶ್ರೀರಾಮ ಸೇನೆ ಕಾರ್ಯಕರ್ತರು. ಆ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಯಾವುದೇ ಗೂಂಡಾ ಕಾಯ್ದೆ ಹಾಕಿರಲಿಲ್ಲ. ಆದರೆ ಹಿಂದೂ ಕಾರ್ಯಕರ್ತರ ವಿರುದ್ಧ ಮೊದಲ ಬಾರಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದೇ ಆರ್.ಅಶೋಕ್. ಕಾಂಗ್ರೆಸ್ ನವರು ಯಾವತ್ತೂ ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ. ಈ ವಿಚಾರವನ್ನು ಆರ್.ಅಶೋಕ್ ಗೆ ನಾನೇ ಹೇಳಿದ್ದೆ. ಆದರೆ ಅಶೋಕ್ ಕಾಂಗ್ರೆಸ್ ನವರು ಕೂಡ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿದ್ದರು. ಈಗ ತಮ್ಮ ಬಾಯಿಯಿಂದಲೇ ಬಣ್ಣ ಬಯಲು ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಚಾಮರಾಜಪೇಟೆಯಲ್ಲಿ ಗಣಪತಿ ಇಡದೇ ಇರಲು ಕಾರಣ ಆರ್.ಅಶೋಕ್. ವಿಪಕ್ಷ ನಾಯಕನಾಗಲು ಆರ್.ಅಶೋಕ್ ಅಯೋಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.