
ಶಿವಮೊಗ್ಗ: ಚುನಾವಣೆ ರಾಜಕೀಯದಿಂದ ಯಡಿಯೂರಪ್ಪ ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪನವರ ಅನುಭವ ಮತ್ತು ಸಲಹೆಯನ್ನು ಬಳಸಿಕೊಳ್ಳುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಈಗಾಗಲೇ ಯಡಿಯೂರಪ್ಪ ಅವರೇ ರಾಜ್ಯ ಪ್ರವಾಸದ ಬಗ್ಗೆ ಹೇಳಿದ್ದಾರೆ. ಬಿಜೆಪಿಯಲ್ಲಿ ಯಡಿಯೂರಪ್ಪ ಯಾವಾಗಲೂ ಗೌರವಯುತ ಸ್ಥಾನದಲ್ಲಿರುತ್ತಾರೆ ಎಂದು ಜೋಶಿ ಹೇಳಿದ್ದಾರೆ.
ಪ್ರಧಾನಿ ಮೋದಿ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ. ಇದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕನಸಿನ ಯೋಜನೆಯಾಗಿದೆ. ಕಾರ್ಯಕ್ರಮದ ಮೂಲಕ ರಾಜ್ಯದ ಜನರಿಗೆ ಮೋದಿ ಕೊಡುಗೆ ನೀಡುತ್ತಾರೆ. ಚುನಾವಣೆ ದೃಷ್ಟಿಯಿಂದ ಈ ಕಾರ್ಯಕ್ರಮ ಬಿಜೆಪಿಗೆ ಅನುಕೂಲ ಆಗುತ್ತದೆ ಎಂದು ಹೇಳಿದ್ದಾರೆ.
ಪದೇ ಪದೇ ಕೇಂದ್ರ ಬಿಜೆಪಿ ನಾಯಕರ ಭೇಟಿಗೆ ಕಾಂಗ್ರೆಸ್ ಟೀಕಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಕಾಂಗ್ರೆಸ್ ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟಾಂಗ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ಅವರನ್ನು ಕರೆದುಕೊಂಡು ಬನ್ನಿ ಬೇಡ ಎಂದವರು ಯಾರು? ರಾಹುಲ್ ಗಾಂಧಿ ಬಂದರೆ ಇರುವ ಮತ ಕೂಡ ಹೋಗುತ್ತದೆ ಎನ್ನುವ ಭಯವಿದೆ. ತಮಗೆ ಸಿಗದದ್ದು ಬೇರೆಯವರಿಗೂ ಸಿಗಬಾರದು ಎನ್ನುವ ಭಾವನೆ ಕಾಂಗ್ರೆಸ್ ನಲ್ಲಿದೆ. ಕಾಂಗ್ರೆಸ್ ನಲ್ಲಿ ಸಮರ್ಥ ನಾಯಕರಿಲ್ಲ. ಹಾಗಾಗಿ ಅವರಿಗೆ ತಲೆನೋವು. ಬಿಜೆಪಿಯ ಕೇಂದ್ರ, ರಾಜ್ಯ ನಾಯಕರು ಸಮರ್ಥರಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯದಿಂದ ಕಾಂಗ್ರೆಸ್ ನಾಯಕಿ ಸ್ವಾಮಿಯ ಗಾಂಧಿ ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜೋಶಿ, ವಯಸ್ಸಿನ ಕಾರಣದಿಂದ ಅವರು ನಿವೃತ್ತಿ ಘೋಷಿಸಿರಬಹುದು. ಸೋನಿಯಾ ಗಾಂಧಿಯವರಿಗೆ ಒಳ್ಳೆಯದಾಗಲಿ. ಬೇರೆ ಏನು ನಾನು ಹೇಳುವುದಿಲ್ಲ ಎಂದರು.