ಹುಬ್ಬಳ್ಳಿ: ರಾಮಮಂದಿರ ನಿರ್ಮಾಣಕ್ಕೆ ನೀಡಿದ ದೇಣಿಗೆ ಲೆಕ್ಕ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ರಾಮಮಂದಿರಕ್ಕೆ ದೇಣಿಗೆ ನೀಡುವುದು ಕಡ್ಡಾಯವಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ದೇಣಿಗೆ ಬಗ್ಗೆ ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದು, ನೀವು ದೇಣಿಗೆ ಕೊಡುವುದಿಲ್ಲ ಎಂದರೆ ನಮ್ಮ ತಕರಾರು ಏನೂ ಇಲ್ಲ. ಆದರೆ, ನಾನು ನನ್ನ ಊರಲ್ಲಿ ರಾಮಮಂದಿರ ಕಟ್ಟಿಸುತ್ತೇನೆ. ಅಲ್ಲೇ ಯಾಕೆ ರಾಮ ಮಂದಿರ ಕಟ್ಟಬೇಕು ಎಂದರೆ ಸರಿಯಲ್ಲ. ನೀವುಗಳು ದೇಣಿಗೆ ಕೊಡುವುದಿಲ್ಲವೆಂದರೆ ಸುಮ್ಮನಿರಿ. ಬಾಯಿಗೆ ಬಂದಹಾಗೆ ಮಾತನಾಡುವುದು ಸರಿಯಲ್ಲ. ಇದರಲ್ಲಿ ಜನರ ಭಾವನೆಯ ಪ್ರಶ್ನೆ ಇದೆ ಎಂದು ಹೇಳಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ದುರಾದೃಷ್ಟಕರ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾದವರು ಮಾಹಿತಿ ಪಡೆದು ಹೇಳಿಕೆ ಕೊಡಬೇಕು. ಇದು ಸರ್ಕಾರ ರಚಿಸಿದ ಟ್ರಸ್ಟ್ ಆಗಿದ್ದು ಎಲ್ಲ ಲೆಕ್ಕ ಇಡಲಾಗುತ್ತದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರದು ಬಾಲಿಶತನದ ಹೇಳಿಕೆಯಾಗಿದೆ. ಪ್ರಚಾರಕ್ಕಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಮುಸಲ್ಮಾನರನ್ನು ತುಷ್ಟೀಕರಣ ಮಾಡುವಂತಹ ಹೇಳಿಕೆ ಇದಾಗಿದೆ. ಈಗ ಮುಸಲ್ಮಾನರು ಸಹ ಕುಮಾರಸ್ವಾಮಿ ಅವರನ್ನು ನಂಬುವುದಿಲ್ಲ ಎಂದು ಜೋಶಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ.ಗೆ ಬೆಂಬಲ ನೀಡಲಾಗ್ತಿದೆ. ಶಾಸಕ ಅಖಂಡ ಶ್ರೀನಿವಾಸರ ಮನೆ ಮೇಲೆ ದಾಳಿ ನಡೆದಾಗ ಸಿದ್ದರಾಮಯ್ಯ ಖಂಡಿಸುವ ಧೈರ್ಯವನ್ನು ತೋರಲಿಲ್ಲ. ಇದೆಲ್ಲಾ ಕಾಂಗ್ರೆಸ್ ಪಕ್ಷದವರ ಎಡಬಿಡಂಗಿ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದಿಶಾ ರವಿ ಬಂಧನದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಟೂಲ್ ಕಿಟ್ ನಲ್ಲಿ ಅತ್ಯಂತ ಸ್ಪಷ್ಟವಾಗಿ ನಮ್ಮದಾಗಿದೆ. ಅದರ ಬಗ್ಗೆ ಅವರೇ ನೋಡಲಿ. ಖಲಿಸ್ತಾನ ಚಳವಳಿ ಬಗ್ಗೆ ಚರ್ಚೆಯಾಗಿರುವುದು ಪತ್ತೆಯಾಗಿದೆ. ಇಂತಹ ದಿಶಾ ರವಿಗೆ ಸಿದ್ದರಾಮಯ್ಯ ಬೆಂಬಲ ಕೊಡುತ್ತಾರೆ. ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ಮಾನಸಿಕತೆ ಹೇಗಾಗಿದೆ ಎಂದರೆ ಮೋದಿಯನ್ನು ವಿರೋಧಿಸಲು ದಾವುದ್ ಇಬ್ರಾಹಿಂ ಬೆಂಬಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.