alex Certify ರೈತರಿಗೆ ಭರ್ಜರಿ ಗುಡ್ ನ್ಯೂಸ್: ಸಿಬಿಲ್ ಸ್ಕೋರ್ ಇಲ್ಲದೇ 10 ಲಕ್ಷ ರೂ. ಸಾಲ ವಿತರಿಸಲು ಬ್ಯಾಂಕ್ ಗಳಿಗೆ ಪ್ರಹ್ಲಾದ್ ಜೋಶಿ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಭರ್ಜರಿ ಗುಡ್ ನ್ಯೂಸ್: ಸಿಬಿಲ್ ಸ್ಕೋರ್ ಇಲ್ಲದೇ 10 ಲಕ್ಷ ರೂ. ಸಾಲ ವಿತರಿಸಲು ಬ್ಯಾಂಕ್ ಗಳಿಗೆ ಪ್ರಹ್ಲಾದ್ ಜೋಶಿ ಸೂಚನೆ

ಧಾರವಾಡ: ಯಾವುದೇ ತಕರಾರು ಇಲ್ಲದೆ ರೈತರಿಗೆ 10 ಲಕ್ಷ ರೂ. ವರೆಗೆ ಬೆಳೆಸಾಲ ನೀಡಲು ಆರ್.ಬಿ.ಐ  ಮಾರ್ಗಸೂಚಿಗಳಿವೆ. ಇದನ್ನು ಬ್ಯಾಂಕರ್ಸ್ ಗಳು ಪಾಲನೆ ಮಾಡಬೇಕು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಅವರು ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಮತಿ ಸಭೆ ಹಾಗೂ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

ಈಗ ರೈತರು ಸಂಕಷ್ಟದಲ್ಲಿದ್ದು, ಅನಗತ್ಯವಾಗಿ ಕೆಲವು ಬ್ಯಾಂಕ್ ಗಳು ಬೆಳೆಸಾಲ ನೀಡಲು ರೈತರಿಗೆ ಸಿಬಿಲ್ ರೇಟ್ ಕಡ್ಡಾಯ ಮಾಡುತ್ತಿವೆ. ಇದರಿಂದ ರೈತರಿಗೆ ಮತ್ತು ರೈತರು ಉತ್ಪಾದಿಸುವ ಆಹಾರದ ಮೇಲೆ ನೇರ ಪ್ರಭಾವ ಬೀರುತ್ತದೆ. ಬ್ಯಾಂಕರ್ಸ್ ಗಳು ಅನ್ವಯವಾಗದ ಕಾಯ್ದೆ, ನಿಯಮಗಳನ್ನು ಹೇಳಿ ರೈತರಿಗೆ ಬೆಳೆ ಸಾಲ ನೀಡುವಲ್ಲಿ ವಿನಾಕಾರಣ ತೊಂದರೆ ಕೊಡಬಾರದು ಎಂದರು.

ಕೇಂದ್ರ ಸರ್ಕಾರದಿಂದ ಸಮುದಾಯ ಮತ್ತು ವ್ಯಕ್ತಿಗತ ಯೋಜನೆಗಳನ್ನು ಸರಿಯಾಗಿ ಅನುಷ್ಠಾನಗೊಳಿಸಬೇಕು. ಕೇಂದ್ರ ಸರ್ಕಾರ ಸ್ವಯಂ ಉದ್ಯೋಗಕ್ಕೆ ಆದ್ಯತೆ ನೀಡುತ್ತಿದೆ. ಬ್ಯಾಂಕಗಳು ನಿಗದಿತ ಗುರಿಗೆ ಅನುಗುಣವಾಗಿ ಸಾಲ ಬಿಡುಗಡೆ ಮಾಡಬೇಕು. ಕಾಲಮಿತಿಯಲ್ಲಿ ಪ್ರಗತಿ ಸಾಧಿಸಬೇಕೆಂದು ಸಚಿವರು ತಿಳಿಸಿದರು.

ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರಭುದೇವ ಎನ್.ಜಿ. ಅವರು ಮಾತನಾಡಿ, ಕೃಷಿ ಬೆಳೆ ಸಾಲವು ಜೂನ್ 2024 ರ ಅಂತ್ಯಕ್ಕೆ 610.8 ಕೋಟಿ ರೂ. ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 650.34 ಕೋಟಿ ರೂ.ಗಳಷ್ಟು ಸಾಧನೆಯಾಗಿದೆ. ಮತ್ತು ಶೇ.106.47 ರಷ್ಟು ತ್ರೈಮಾಸಿಕ ಗುರಿಯ ಶೇಕಡಾವಾರು ಸಾಧನೆಯಾಗಿದೆ.  ಕೃಷಿ ಅವಧಿ ಸಾಲವು ಜೂನ್ 2024 ರ ಅಂತ್ಯಕ್ಕೆ 615.66 ಕೋಟಿ ರೂ.ಗಳಷ್ಟು ಗುರಿಯನ್ನು ಹೊಂದಿದ್ದು, ಜೂನ್ 2024 ರ ಅಂತ್ಯಕ್ಕೆ 641.57 ಕೋ.ರೂ.ಗಳಷ್ಟು ಸಾಧನೆಯಾಗಿದೆ. ಶೇ. 104.18 ರಷ್ಟು ತ್ರೈಮಾಸಿಕ ಗುರಿಗೆ ಸಾಧನೆಯಾಗಿದೆ ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು, ಆರ್.ಬಿ.ಐ ಜಿಲ್ಲಾ ಅಗ್ರಣೀಯ ಅಧಿಕಾರಿ ಅರುಣಕುಮಾರ, ಬ್ಯಾಂಕ್ ಆಫ್ ಬರೋಡಾದ ಜಿಲ್ಲಾ ಪ್ರಾದೇಶಿಕ ವ್ಯವಸ್ಥಾಪಕ ವಿಜಯ ಪಾಟೀಲ, ನಬಾರ್ಡ್ ಎಜಿಎಮ್ ಮಯೂರ ಕಾಂಬ್ಳೆ ಅವರು ಮಾತನಾಡಿದರು. ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ ಪ್ರಭುದೇವ ಎನ್.ಜಿ. ಅವರು ಸ್ವಾಗತಿಸಿ, ಸಭೆ ನಿರ್ವಹಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...