ಶಿವಮೊಗ್ಗ: ಪಠ್ಯಪುಸ್ತಕ ಪರಿಷ್ಕರಣೆ, ಹೋಮ-ಹವನದಲ್ಲಿ ಭಾಗಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಮಾಧ್ಯಮ ಸಂವಾದದಲ್ಲಿ ಭಾಗಿಯಾಗಿ ಮಾತನಾಡಿದ ನಟ ಪ್ರಕಾಶ್ ರಾಜ್, ದೇಹಕ್ಕಾದ ಗಾಯ ಸುಮ್ಮನಿದ್ದರೂ ವಾಸಿಯಾಗುತ್ತದೆ, ಆದರೆ ದೇಶಕ್ಕೆ ಸಮಾಜಕ್ಕಾದ ಗಾಯ ಸುಮ್ಮನಿದ್ದಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದ್ದಾರೆ.
ಪಠ್ಯಪುಸ್ತಕ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಪ್ರಕಾಶ್ ರಾಜ್, ಪಠ್ಯಪುಸ್ತಕ ಬದಲಾವಣೆ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಭೂಮಿಯ ಮೇಲೆ ವಿಷಾನಿಲ ಹಾಕುವ ಹಾಗೇ ಏನೇನೋ ಹಾಕಿದರೆ ನಾವು ಸುಮ್ಮನಿರಲು ಸಾಧ್ಯವೆ? ಅದನ್ನು ಪ್ರಶ್ನಿಸಬೇಕು. ನಮ್ಮ ಮಕ್ಕಳ ಜೀವನದಲ್ಲಿ ಯಾರು ಆಟವಾಡುತ್ತಿದ್ದಾರೆ ಎಬ ಬಗ್ಗೆ ಎಚ್ಚರವಾಗಿರಬೇಕು. ರಾಜಕೀಯ ವ್ಯಕ್ತಿಗಳು ಪಠ್ಯಪುಸ್ತಕ ತಿರುಚಿದಾಗ ಎಚ್ಚೆತ್ತುಕೊಳ್ಳಬೇಕು. ಶಾಲಾ-ಕಾಲೇಜುಗಳಲ್ಲಿ ಕೇಸರಿ ಬಣ್ಣ ಬಳಿಯುತ್ತೇವೆ ಎಂದರೆ ಅದು ತಪ್ಪಲ್ಲವೇ? ಎಂದು ಕೇಳಿದ್ದಾರೆ.
ನಾನು ಧರ್ಮದ ಬಗ್ಗೆ ಯಾವತ್ತೂ ಮಾತನಾಡಿಲ್ಲ, ಆದರೆ ಇಂತಹ ವಿಷಯ ಹೇಳಿದಾಗ ನನ್ನನ್ನು ಧರ್ಮ ವಿರೋಧಿ ಎಂದು ಹೇಳುತ್ತಾರೆ. ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷ ಧರ್ಮವಲ್ಲ, ಧರ್ಮ ಎಂಬುದು ನನ್ನದು. ರಾಜಕೀಯ ವ್ಯಕ್ತಿಗಳ ಕೆಲಸ ಆಡಳಿತ ನಡೆಸುವುದು, ಯುವಕರಿಗೆ ಉದ್ಯೋಗ ಒದಗಿಸುವುದು, ಬಡವರಿಗೆ ಸೌಲಭ್ಯ ಕಲ್ಪಿಸುವುದು ಆಗಬೇಕು ಎಂದರು.
ಇದೇ ವೇಳೆ ಹೋಮ-ಹವನದಲ್ಲಿ ಭಾಗಿಯಾದ ಬಗ್ಗೆ ಟೀಕೆಗಳು ವ್ಯಕ್ತವಾಗುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರಾಜ್, ನನ್ನ ನಂಬಿಕೆ, ನನ್ನ ಪತ್ನಿಯ ನಂಬಿಕೆ ವಿಭಿನ್ನವಾದದ್ದು. ಅವರ ನಂಬಿಕೆಯನ್ನು ವಿರೋಧಿಸುವ ಹಕ್ಕು ನನಗಿಲ್ಲ. ಹೋಮಕ್ಕೆ ಹೋಗುವುದರಲ್ಲಿ ನನಗೆ ಸಮಸ್ಯೆ ಇಲ್ಲ ಎಂದ ಮೇಲೆ ನಿಮಗೇನು ಸಮಸ್ಯೆ? ನನ್ನ ಅರ್ಧಾಂಗಿ, ನನ್ನ ಮಕ್ಕಳ ತಾಯಿ, ನನ್ನನ್ನು ಪ್ರೀತಿಸುವ ಹೆಂಡತಿ ಅದನ್ನೊಪ್ಪಿದರೆ ನಾನು ಅದನ್ನು ಗೌರವಿಸಬೇಕು. ನಾನು ನನ್ನ ಪತ್ನಿಯನ್ನು ಗೌರವಿಸುತ್ತೇನೆ. ಯಾರೋ ಅದನ್ನು ತಿರುಚಿ ಬರೆದರೆ ನಾನು ಅದಕ್ಕೆ ಉತ್ತರ ಕೊಡಬೇಕಿಲ್ಲ ಎಂದು ಹೇಳಿದರು.