ಮೈಸೂರು: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ನಟ ಪ್ರಕಾಶ್ ರಾಜ್, ಪವಿತ್ರ ತೀರ್ಥ ಸ್ನಾನ ಮಾಡುತ್ತಿರುವ ರೀತಿಯ ನಕಲಿ ಫೋಟೋ ಸೃಷ್ಟಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಪ್ರಕಾಶ್ ರಾಜ್ ದೂರು ದಾಖಲಿಸಿದ್ದಾರೆ.
ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ನಟ ಪ್ರಕಾಶ್ ರಾಜ್ ದೂರು ನೀಡಿದ್ದಾರೆ. ಎಐ ತಂತ್ರಜ್ಞಾನ ಬಳಸಿ ನಕಲಿ ಫೋಟೋ ಸೃಷ್ಟಿಸಿ ವೈರಲ್ ಮಾಡಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಪ್ರಕಾಶ್ ರಾಜ್ ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಟ ಪ್ರಕಾಶ್ ರಾಜ್, ನಾನು ಎಂದಾದರೂ ಧರ್ಮದ ಬಗ್ಗೆ ಮಾತನಾಡಿದ್ದೇನಾ? ಧರ್ಮ ಧರ್ಮಗಳ ಮೇಲೆ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಇದೇ ಅವರ ಕೆಲಸವಾಗಿದೆ. ನನಗೆ ಪ್ರಶಾಂತ್ ಸಂಬರ್ಗಿ ಯಾರು ಅಂತಾನೇ ಗೊತ್ತಿಲ್ಲ. ಎಐ ತಂತ್ರಜ್ಞಾನ ಬಳಸಿ ನನ್ನ ನಕಲಿ ಫೋಟೋ ಸೃಷ್ಟಿಸಿ ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಪೊಲಿಸ್ ಠಾಣೆಯಲ್ಲಿ ದೂರು ನೀಡಿ ಎಫ್ಐಆರ್ ದಾಖಲಿಸಿದ್ದೇನೆ ಎಂದರು.
ಇದೇ ವೇಳೆ ಮಹಾಕುಂಭ ಮೇಳ ದೇವರನ್ನು ನಂಬುವವರಿಗೆ ಹಾಗೂ ಹಿಂದೂ ಧರ್ಮದವರಿಗೆ ಒಂದು ಪುಣ್ಯ ಸ್ಥಳ. ಆದರೆ ನನ್ನ ನಕಲಿ ಫೋಟೋ ಸೃಷ್ಟಿಸಿ ವೈರಲ್ ಮಾಡುತ್ತಿದ್ದಾರೆ. ಅಂಥಹ ಪುಣ್ಯ ಸ್ಥಳ, ಕೆಲಸಗಳಲ್ಲಿಯೂ ರಾಜಕಾರಣ ಮಾಡುತ್ತಿದ್ದಾರೆ. ಇಂತವರು ಮೊದಲಿನಿಂದಲೂ ಪ್ರಕಾಶ್ ರಾಜ್ ಹಿಂದೂ ವಿರೋಧಿ ಎಂದು ಸುಳ್ಳು ಸುದ್ದಿ ಹಬ್ಬಿಸಿಕೊಂಡು ಬಂದಿದ್ದಾರೆ. ಪ್ರಶಾಂತ್ ಸಂಬರ್ಗಿ ಎಷ್ಟು ಪ್ರಖ್ಯಾತರೋ ಕುಖ್ಯಾತರೋ ಎಂಬುದು ನನಗೆ ಗೊತ್ತಿಲ್ಲ, ಆದರೆ ನನ್ನ ಬಗ್ಗೆ ದೇಶದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಅಭ್ಯಾಸವಾಗಿದೆ. ಇಂತವರು ನಿಜವಾಗಿಯೂ ಧರ್ಮ ಅನುಸರಿಸುವವರಲ್ಲ ಎಂದು ಕಿಡಿಕಾರಿದರು.