ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2024- 25 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಸ್ವೀಕರಿಸಲು ಖ್ಯಾತ ನಟ ಪ್ರಕಾಶ್ ರೈ ನಿರಾಕರಿಸಿದ್ದಾರೆ.
ನನಗಿಂತಲೂ ಅರ್ಹರು ರಂಗಭೂಮಿಯಲ್ಲಿರುವುದರಿಂದ ಈ ಪುರಸ್ಕಾರವನ್ನು ಸ್ವೀಕರಿಸಲು ನನ್ನ ಮನಃಸಾಕ್ಷಿ ಒಪ್ಪುತ್ತಿಲ್ಲ. ಕ್ಷಮಿಸಿ, ಅಭಿನಂದಿಸಿದ ಸಹೃದಯರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಪ್ರಶಸ್ತಿ ಆಯ್ಕೆ ಸಂಧರ್ಭದಲ್ಲಿ ಪ್ರಕಾಶ್ ರೈ ಅವರು ಪ್ರಶಸ್ತಿ ಸ್ವೀಕರಿಸಲು ಒಪ್ಪಿಗೆ ಸೂಚಿಸಿದ್ದರು. ಅಕಾಡೆಮಿ ಕೂಡ ಅವರ ಒಪ್ಪಿಗೆಯೊಂದಿಗೆ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಿದೆ. ಈಗ ಏಕಾಏಕಿ ನಿರ್ಧಾರ ಬದಲಿಸಿಕೊಂಡು ಪ್ರಶಸ್ತಿ ನಿರಾಕರಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಲು ಅವರ ಮನವೊಲಿಸುವ ಪ್ರಯತ್ನ ನಡೆಸಲಾಗುವುದು. ನಿರ್ಧಾರ ಬದಲಿಸದಿದ್ದಲ್ಲಿ ಈಗಾಗಲೇ ಆಯ್ಕೆ ಸಮಿತಿ ಕಾಯ್ದಿರಿಸಿದ ಮೂವರಲ್ಲಿ ಒಬ್ಬರನ್ನು ಪ್ರಶಸ್ತಿ ಆಯ್ಕೆ ಮಾಡಲಾಗುವುದು ಎಂದು ಹೇಳಲಾಗಿದೆ.