ಬೆಳಗಾವಿ: ಹೈಕಮಾಂಡ್ ಹೇಳಿದಂತೆ ಕೇಳಲು ನಾನೇನು ಫುಟ್ಬಾಲಾ? ಹೈಕಮಾಂಡ್ ನವರು ಎಷ್ಟೇ ಒತ್ತಡ ಹೇರಿದರೂ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ್ ಹುಕ್ಕೇರಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ವಿಧಾನ ಪರಿಷತ್ ಸದಸ್ಯನಾಗಿಯೇ ಮುಂದುವರೆಯುತ್ತೇನೆ. ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಎಂದು ಹೈಕಮಾಂಡ್ ಹೇಳಿದರೆ ಕೇಳಲು ನಾನೇನು ಫುಟ್ಬಾಲಾ ಎಂದು ಪ್ರಶ್ನಿಸಿದ್ದಾರೆ.
ಕಳೆದ ಬಾರಿ ಸಚಿವನಾಗಿದ್ದಾಗ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಸಂಸದನಾಗಿ ಸಚಿವ ಸ್ಥಾನ ಕಳೆದುಕೊಂಡೆ. ಈಗ ನಾನು ವಿಧಾನಪರಿಷತ್ ಸದಸ್ಯನಾಗಿದ್ದೇನೆ. ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧಿಸಲು ನಾನೇನು ಫುಟ್ಬಾಲಾ? ಸಿದ್ದರಾಮಯ್ಯ ಅವರು ಸ್ಪರ್ಧಿಸಿ ಎಂದರೂ ನಾನು ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ನನ್ನನ್ನು ದೆಹಲಿಗೆ ಹೋಗಿ ಎಂದು ಒಗೆದರು. ಈಗ ಶಿಕ್ಷಕರ ಸೇವೆ ಮಾಡಲು ಶಿಕ್ಷಕರು ನನ್ನನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಆಯ್ಕೆ ಮಾಡಿದ್ದಾರೆ. ಇನ್ನೂ ಐದು ವರ್ಷ ನನ್ನ ಅವಧಿ ಇದೆ. ಶಿಕ್ಷಕರ ಬೇಡಿಕೆಗಳು ಬಹಳಷ್ಟು ಇವೆ. ಅವುಗಳನ್ನು ಈಡೇರಿಸಲು ನನಗೆ ಐದು ವರ್ಷ ಬೇಕು. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಸಿಎಂ ನಿಲ್ಲಬೇಕು ಎಂದು ಹೇಳಿದರೆ ಅವರಿಗೆ ಏನಾದರೂ ಬರೆದು ಕೊಟ್ಟಿದ್ದೇನಾ? ನಾನು ಲೋಕಸಭೆ, ರಾಜ್ಯಸಭಾ ಚುನಾವಣೆಗೆ ನಿಲ್ಲುವುದಿಲ್ಲ. ಚಿಕ್ಕೋಡಿ ಅಭ್ಯರ್ಥಿ ಯಾರು ಎಂದು ಹೈಕಮಾಂಡ್ ಕೇಳಬೇಕು. ನನಗೆ ಎಷ್ಟೇ ಒತ್ತಡ ಹೇರಿದರೂ ಲೋಕಸಭೆ ಚುನಾವಣೆಗೆ ನಿಲ್ಲುವುದಿಲ್ಲ. ಶಿಕ್ಷಕರ ಕ್ಷೇತ್ರದಲ್ಲೇ ಮುಂದುವರೆಯುತ್ತೇನೆ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಮತ್ತೆ ಪ್ರಕಾಶ್ ಹುಕ್ಕೇರಿ ಹೆಸರು ಪ್ರಸ್ತಾಪವಾಗಿದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡ ವಿಚಾರಕ್ಕೆ ಪ್ರಕಾಶ್ ಹುಕ್ಕೇರಿ ಗರಂ ಆಗಿದ್ದಾರೆ.