ಬೆಂಗಳೂರು: ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ಇಂದು ಸಹ ರಾಜ್ಯಕ್ಕೆ ಬರುವುದು ಅನುಮಾನ ಎನ್ನಲಾಗಿದೆ. ಕಳೆದ 2 ದಿನಗಳಿಂದ ಪ್ರಜ್ವಲ್ ಗಾಗಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೇ ಎಸ್ಐಟಿ ಅಧಿಕಾರಿಗಳು ಕಾದು ಕುಳಿತಿದ್ದಾರೆ.
ಈಗಾಗಲೇ ಪ್ರಜ್ವಲ್ ರೇವಣ್ಣಗೆ ವಿಚಾರಣೆಗೆ ಹಾಜರಾಗುವಂತೆ ನೀಡಲಾಗಿದ್ದ ಡೆಡ್ ಲೈನ್ ಅವಧಿ ಮುಗಿದಿದ್ದು, ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿದೆ. ದುಬೈನ ಅಪಾರ್ಟ್ ಮೆಂಟ್ ಒಂದರಲ್ಲಿ ಪ್ರಜ್ವಲ್ ಇರುವುದಾಗಿ ಹೇಳಲಾಗಿತ್ತು. ನಿನ್ನೆ ಸಂಜೆಯೊಳಗಾಗಿ ಪ್ರಜ್ವಲ್ ದೇಶಕ್ಕೆ ಆಗಮಿಸಲಿದ್ದಾರೆ ಎನ್ನಲಾಗಿತ್ತು. ಈ ನಿಟ್ಟಿನಲ್ಲಿ ಎಸ್ಐಟಿ ಅಧಿಕಾರಿಗಳು ಬೆಂಗಳೂರಿನ ಕೆಐಎಗೆ ತೆರಳಿ ಬಂಧಿಸಲು ಸಿದ್ಧತೆ ನಡೆಸಿದ್ದರು. ಆದರೆ ಪ್ರಜ್ವಲ್ ರೇವಣ್ಣ ಸುಳಿವಿಲ್ಲ.
ಇಂದು ಕೂಡ ಎಸ್ಐಟಿ ಅಧಿಕಾರಿಗಳು ಏರ್ ಪೋರ್ಟ್ ನಲ್ಲಿಯೇ ಬೀಡು ಬಿಟ್ಟಿದ್ದಾರೆ. ಅಲ್ಲದೇ ಇಮಿಗ್ರೇಷನ್ ನಲ್ಲಿ ಪ್ರಯಾಣಿಕರ ಲಿಸ್ಟ್ ಪರಿಶೀಲನೆ ನಡೆಸಿದ್ದಾರೆ. ಪ್ರಜ್ವಲ್ ಪಾಸ್ ಪೋರ್ಟ್ ನಂಬರ್ ಸಮೇತ ಟಿಕೆಟ್ ಪರಿಶೀಲನೆ ನಡೆಸಲಾಗಿದ್ದು, ಈವರೆಗೂ ಪ್ರಜ್ವಲ್ ಟಿಕೆಟ್ ಬುಕ್ ಮಾಡಿಲ್ಲ ಎನ್ನಲಾಗಿದೆ. ಹಾಗಾಗಿ ಪ್ರಜ್ವಲ್ ರೇವಣ್ಣ ಇಂದು ಸಹ ರಾಜ್ಯಕ್ಕೆ ಬರುವುದು ಅನುಮಾನ ಎನ್ನಲಾಗಿದೆ.
ಮೇ 7ರ ಬಳಿಕ ಪ್ರಜ್ವಲ್ ರೇವಣ್ಣ ದೇಶಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.