ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ 2-3 ತಿಂಗಳ ಹಿಂದೆಯೇ ವಿಡಿಯೋ ಬಿಡುಗಡೆಯಾಗಿದೆ. ಸ್ಟೇಡಿಯಂ ಬಳಿಯೂ ಪೆನ್ ಡ್ರೈವ್ ಸಿಕ್ಕಿದೆ 25 ಸಾವಿರ ಪೆನ್ ಡ್ರೈವ್ ಮಾಡಲಾಗಿದೆ ಎಂದರೆ ಉದ್ದೇಶಪೂರ್ವಕವಾಗಿಯೇ ವಿಡಿಯೋ ಬಿಡಿಗಡೆ ಮಾಡಲಾಗಿದೆ ಎಂಬುದು ಸ್ಪಷ್ಟ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಹಿಂದೆ ಬಿಜೆಪಿ ನಾಯಕರ ಕೈವಾಡವಿದೆ. ಇದನ್ನು ದೇವರಾಜೇಗೌಡರೇ ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ ಹೀನಾಯ ಕೃತ್ಯ ಮಾಡಿದ್ದು, ವಿಡಿಯೋ ಕದ್ದಿದ್ದು ಡ್ರೈವರ್. ಅದನ್ನು ಕೊಟ್ಟಿದ್ದು ಬಿಜೆಪಿ ನಾಯಕ ದೇವರಾಜೇಗೌಡ. ಆತನೇ ವಿಡಿಯೋ ಕೊಟ್ಟಿದ್ದ ಎಂದ ಮೇಲೆ ಬೇರೆ ಪಕ್ಷದ ಕೈವಾಡ ಹೇಗೆ ಬರುತ್ತೆ? ಎಂದರು.
ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡ ಹೇಗೆ ಆಗುತ್ತೆ? ಬಿಜೆಪಿ-ಜೆಡಿಎಸ್ ನಾಯಕರು ಪೆನ್ ಡ್ರೈವ್ ಹಂಚಿಕೆ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ಮನೆ ಮಗ ಇಂತಹ ಕೃತ್ಯವೆಸಗಿರುವ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಆಡಿಯೋದಲ್ಲಿ ಹೇಳಿರುವುದನ್ನು ನಾನೂ ಕೇಳಿದ್ದೇನೆ. ಅದರಲ್ಲಿ ಬಿಜೆಪಿ ವರಿಷ್ಠರಿಗೆ ಎಲ್ಲವೂ ಗೊತ್ತಿತ್ತು ಎಂದಿದ್ದಾರೆ. ಎಲ್ಲಾ ಗೊತ್ತಿದ್ದರೂ ಯಾಕೆ ಪ್ರಜ್ವಲ್ ಗೆ ಟಿಕೆಟ್ ಕೊಟ್ಟರು? ಮಾಜಿ ಪ್ರಧಾನಿಯ ಕ್ಷೇತ್ರದ ಬಗ್ಗೆ ಚರ್ಚೆ ಮಾಡದೆಯೇ ಟಿಕೆಟ್ ಕೊಟ್ಟಿದ್ದಾರಾ? ಗೊತ್ತಿದ್ದು ಟಿಕೆಟ್ ಕೊಟ್ಟಿರುವುದರ ಹಿಂದಿನ ಸಂಚೇನು? ಎಂದು ಪ್ರಶ್ನಿಸಿದ್ದಾರೆ.