ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಪೆನ್ ಡ್ರೈವ್ ಹಂಚಿಕೆ ಕೇವಲ ಹಾಸನ ಜಿಲ್ಲೆಗೆ ಮಾತ್ರ ಹಂಚಿಕೆಯಾಗಿಲ್ಲ, ಬೆಂಗಳೂರು ಗ್ರಾಮಾಂತರಕ್ಕೂ ಹಂಚಿಕೆಯಾಗಿದೆ. 25 ಸಾವಿರ ಪೆನ್ ಡ್ರೈವ್ ಹಂಚಿದ್ದಾರೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಪೆನ್ ಡ್ರೈವ್ ಹಂಚಿಕೆಯಲ್ಲಿ ಪೊಲೀಸ್ ಅಧಿಕಾರಿಗಳೇ ಸಹಕಾರ ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆ ರಚನೆಯಾಗಿರುವ ಎಸ್ಐಟಿ ವಿಶೇಷ ತನಿಖಾ ದಳವಲ್ಲ ಇದು ಒಂದು ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್, ಮತ್ತೊಂದು ಡಿ.ಕೆ.ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಮ್ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏಪ್ರಿಲ್ 21ರಂದು ಪೆನ್ ಡ್ರೈವ್ ಹಂಚಿಕೆಯಾಗಿದೆ. ನವೀನ್ ಗೌಡ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೇಟಸ್ ಹಾಕಿದ್ದ. ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು. ನವೀನ್ ಗೌಡ, ಶ್ರೇಯಸ್, ಪುಟ್ಟಿ ಅಲಿಯಾಸ್ ಪುಟ್ಟಗೌಡ ಸೇರಿದಂತೆ ಐವರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮಗಳನು ಕೈಗೊಳ್ಳಲಿಲ್ಲ. 25 ಸಾವಿರ ಪೆನ್ ಡ್ರೈವ್ ಹಂಚಿಕೆ ಮಾಡಿದ್ದಾರೆ. ಈ ಪ್ರಕರಣದಿಂದ ನನಗೆ ತುಬಾ ನೋವಾಗಿದೆ. ಇದರಲ್ಲಿ ನಾನು ಯಾರನ್ನೂ ರಕ್ಷಿಸುತ್ತಿಲ್ಲ. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ರೂ ಅವರಿಗೆ ಕಠಿಣ ಶಿಕ್ಷೆ ಯಾಗಲಿ ಎಂದು ಹೇಳಿದರು.
ಪೆನ್ ಡ್ರೈವ್ ಸೂತ್ರಧಾರ ಕಾರ್ತಿಕ್ ಗೌಡ. ಕಾರ್ತಿಕ್ ಗೌಡನನ್ನು ಯಾಕೆ ಈವರೆಗೆ ಬಂಧಿಸಿಲ್ಲ. ಆತ ಯಾಕೆ ಎಲ್ಲಿಯೂ ಹೊರ ಬರುತ್ತಿಲ್ಲ. ಕೇವಲ ವಿಡಿಯೋ ಹೇಳಿಕೆಗಳನ್ನು ಮಾತ್ರ ನೀಡುತ್ತಿದ್ದಾನೆ? ಕಾರ್ತಿಕ್ ಗೌಡನನ್ನು ಯಾಕೆ ರಕ್ಷಣೆ ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಸಂತ್ರಸ್ತೆ ಕಿಡ್ನ್ಯಾಪ್ ಆಗಿರುವ ಪ್ರಕರಣ ಬೆಳಕಿಗೆ ಬಂದಾಗ ಮಹಿಳೆ ಬದುಕಿದ್ದಾಳೋ ಸತ್ತಿದ್ದಾಳೋ ಗೊತ್ತಿಲ್ಲ ಎಂದು ಅಂದು ಹೆಳಿಕೆ ಕೊಟ್ಟವರು ಬಳಿಕ ಆಕೆಯಕ್ನು ಎಲ್ಲಿಂದ ಹುಡುಕಿ ತಂದಿರಿ? ಯಾವುದೇ ಒಂದು ಪ್ರಕರಣದ ತನಿಖೆ ಆರಂಭವಾದಾಗ ಮಾಹಿತಿ ಸೋರಿಕೆ ಆಗಬಾರದು. ಆದರೆ ಇಲ್ಲಿ ಆಗುತ್ತಿರುವುದೇನು? ಸರ್ಕಾರಕ್ಕೆ ಸಂತ್ರಸ್ತೆಯ ರಕ್ಷಣೆ ಬೇಕಾಗಿಲ್ಲ. ಈ ಸರ್ಕಾರಕ್ಕೆ ಬೇಕಾಗಿರುವುದು ಕೇವಲ ಪ್ರಚಾರ. ಪ್ರಕರಣದ ಬಗ್ಗೆ ಸರಿಯಾದ ರೀತಿಯಲ್ಲಿ, ಪ್ರಾಮಾಣಿಕವಾಗಿ ತನಿಖೆಯಾದರೆ ಎಲ್ಲ ಸತ್ಯವೂ ಹೊರಬರುತ್ತದೆ ಎಂದು ಹೇಳಿದರು.