ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದ ಬಳಿಕ ವಿದೇಶಕ್ಕೆ ಹಾರಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಾಸ್ ಆಗಲು ಮೀನಾಮೇಷ ಎಣಿಸುತ್ತಿದ್ದು, ಪದೇ ಪದೇ ಟಿಕೆಟ್ ರದ್ದುಪಡಿಸಿ ಎಸ್ಐಟಿ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ.
ಈ ನಡುವೆ ಪ್ರಜ್ವಲ್ ರೇವಣ್ಣ ಬಗ್ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ, ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಜೆಡಿಎಸ್ ಹಿರಿಯ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ಪ್ರಜ್ವಲ್ ರೇವಣ್ಣ ಯಾವ ದೇಶದಲ್ಲಿದ್ದಾರೆ, ಎಲ್ಲಿದ್ದಾರೆ ಯಾರಿಗೂ ತಿಳಿಯುತ್ತಿಲ್ಲ, ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ತನಿಖೆಯಿಂದ ಸಾತ್ಯಾಸತ್ಯತೆ ಗೊತ್ತಾಗಬೇಕು ಎಂದರು.
ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದೂ ಹೇಳಿದ್ದಾರೆ. ಸರ್ಕಾರ ಹೇಳಿದಂತೆ ಎಸ್ಐಟಿಯವರು ತನಿಖೆ ಮಾಡುತ್ತಿದ್ದಾರೆ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ನಾವು ಆಗ್ರಹಿಸಿದ್ದೇವೆ. ಪ್ರಜ್ವಲ್ ಪ್ರಕರಣವನ್ನು ಸಿಬಿಐಗೆ ವಹಿಸಲಿ ಎಂದು ಹೇಳಿದರು.