ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಪ್ರಜ್ವಲ್ ರೇವಣ್ಣನ ವಿರುದ್ಧ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ವಿಳಂಬ ಮಾಡಿದೆ ಎಂದು ಆರೋಪಿಸಿದ್ದರು. ಪ್ರಕರಣದ ಬಗ್ಗೆ ದೂರು ದಾಖಲಾದಾಗಿನಿಂದ ಈವರೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ಕಾಂಗ್ರೆಸ್ ಸ್ಪಷ್ಟ ಮಾಹಿತಿ ನೀಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೆ ಕೆಲ ವಿಷಯಗಳು..
◆ ಸಂತ್ರಸ್ತೆಯರ ದೂರು ದಾಖಲಾಗಿ ಕೆಲವೇ ಗಂಟೆಗಳಲ್ಲಿ SIT ರಚನೆ ಮಾಡುವುದಾಗಿ ಘೋಷಿಸಿದೆ.
◆ SIT ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಮೂವರು ದಕ್ಷ ಅಧಿಕಾರಿಗಳ ತಂಡವನ್ನು ರಚಿಸಿದೆ.
◆ ನೇಮಕವಾದ ಅಧಿಕಾರಿಗಳು ಕೆಲವೇ ಗಂಟೆಗಳಲ್ಲಿ ತನಿಖೆ ಶುರು ಮಾಡಿದ್ದಾರೆ ಎಂದು ತಿಳಿಸಿದೆ. ಇದರ ಜೊತೆಗೆ ಕಾಂಗ್ರೆಸ್ ಕೇಂದ್ರ ಗೃಹ ಸಚಿವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದೆ.
* 08/12/2023ರಂದೇ ಪತ್ರದ ಮೂಲಕ ಮಾಹಿತಿ ಬಂದಿದ್ದರೂ ಗೃಹ ಸಚಿವರಾಗಿ ತಾವೇಕೆ ಸುಮ್ಮನಿದ್ದಿರಿ?
* ನಾರಿಶಕ್ತಿ, ಮಾತೃಶಕ್ತಿ ಅಂತೆಲ್ಲಾ ಪುಂಖಾನುಪುಂಖವಾಗಿ ಮಾತಾಡುವ ತಾವು ನಿನ್ನೆ ಕರ್ನಾಟಕದಲ್ಲಿದ್ದರೂ ಸಂತ್ರಸ್ತರನ್ನು ಭೇಟಿಯಾಗಿ ಧೈರ್ಯ ತುಂಬದೆ ಹೋಗಿದ್ದೇಕೆ?
* ಕಳೆದ ವರ್ಷವೇ ಮಾಹಿತಿ ಇದ್ದರೂ, ಹಾಗೂ ರಾಜ್ಯದಲ್ಲಿ ಪ್ರಕರಣ ದಾಖಲಾಗಿದ್ದು ತಿಳಿದಿದ್ದರೂ ಪ್ರಜ್ವಲ್ ರೇವಣ್ಣನ ಪಾಸ್ಪೋರ್ಟ್ ಅಮಾನತು ಮಾಡದಿರುವುದೇಕೆ?
* 08/12/2023 ರಂದು ನಿಮ್ಮದೇ ಪಕ್ಷದ ದೇವರಾಜೇಗೌಡರಿಂದ ಪತ್ರ ಬಂದ ತಕ್ಷಣವೇ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಲಿಲ್ಲ ಏಕೆ?
* 08/12/2023 ರಂದು ನಿಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರರಿಗೂ ಈ ಪತ್ರ ತಲುಪಿದೆ, ಇಂತಹ ಗಂಭೀರ ಪ್ರಕರಣದ ಮಾಹಿತಿ ಸಿಕ್ಕ ತಕ್ಷಣವೇ ಅವರೇಕೆ ಸರ್ಕಾರಕ್ಕೆ ದೂರು ಸಲ್ಲಿಸಲಿಲ್ಲ? ಎಂದು ಪ್ರಶ್ನಿಸಿದೆ.
ಪ್ರಜ್ವಲ್ ರೇವಣ್ಣನಿಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ SIT ನೋಟಿಸ್ ನೀಡಿತ್ತು, ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಕರೆತರಲು SIT ತಂಡ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ.
ಮಹಿಳೆಯರ ಮಾನಹರಣ ಮಾಡಿದ ಪ್ರಜ್ವಲ್ ರೇವಣ್ಣನ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವಲ್ಲಿ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.