
ಹಾಸನ: ಲೋಕಸಭಾ ಚುನಾವಣಾ ಅಖಾಡ ರಂಗೇರಿದೆ. ಮತದಾರರನ್ನು ಒಲಿಸಿಕೊಳ್ಳಲು ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಹಾಸನದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಸಿರುವ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆರ್.ಎಸ್.ಎಸ್ ಬಗ್ಗೆ ತಿಳಿಯದೇ ಮಾತನಾಡಿದ್ದಕ್ಕೆ ಕ್ಷಮೆ ಇರಲಿ ಎಂದಿದ್ದಾರೆ.
ಬಿಜೆಪಿ-ಜೆಡಿಎಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ, ನನ್ನ ಗಮನಕ್ಕೆ ಬಾರದೇ ಆರ್.ಎಸ್.ಎಸ್ ಬಗ್ಗೆ ಮಾತನಾಡಿದ್ದೆ. ಆದರೆ ಇವತ್ತು ಅರಿವಾಗಿದೆ. ಆರ್.ಎಸ್.ಎಸ್ ಬಗ್ಗೆ ತಿಳಿಯದೇ ಮಾತನಾಡಿದ್ದಕ್ಕೆ ಮುಖಂಡರು ಕ್ಷಮಿಸಬೇಕು ಎಂದಿದ್ದಾರೆ.
ನಾನು ಮೊದಲ ಬಾರಿ ಸಂಸದನಾಗಿ ಆಯ್ಕೆಯಾಗಿದ್ದಾಗ ನನಗೆ 27 ವರ್ಷ ವಯಸ್ಸು ಐದು ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ. ಐದು ವರ್ಷಗಳ ಕಾಲ ಮಾಡಿದ ಕೆಲಸ, ಪ್ರಗತಿ ಬಗ್ಗೆ ಯಾರೂ ಪ್ರಶ್ನೆ ಮಾಡಲ್ಲ. ಪ್ರಜ್ವಲ್ ರೇವಣ್ಣ ಗೆದ್ದರೆ ಬಿಜೆಪಿ ಕಾರ್ಯಕರ್ತರನ್ನು ತೆಗೆದುಕೊಂಡು ಹೋಗುತ್ತಾನಾ? ಎಂಬ ಪ್ರಶ್ನೆ ನಿಮ್ಮೆಲ್ಲರಲ್ಲಿದೆ. ಬಿಜೆಪಿ-ಜೆಡಿಎಸ್ ಪ್ರತಿಯೊಬ್ಬ ಕಾರ್ಯಕರ್ತರನ್ನು ಗೌರವಿಸಿ, ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಐದು ವರ್ಷಗಳಲ್ಲಿ ಸಣ್ಣಪುಟ್ಟ ತಪ್ಪು ಮಾಡಿದ್ದರೆ ಕ್ಷಮಿಸಿ. ಒಬ್ಬ ಯುವಕ ನಡೆಯುವಾಗ ಎಡವುತ್ತಾನೆ. ಈಗ ಎಡವಿರಬಹುದು ತಿದ್ದಿಕೊಳ್ಳಲು ಅವಕಾಶಕೊಟ್ಟರೆ ಮುನ್ನಡೆಯುತ್ತೇನೆ. ವಿಶ್ವಾಸವಿಡಿ ಎಂದು ಕೇಳಿಕೊಂಡಿದ್ದಾರೆ.