ಹಾಸನ: ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮೇ 31ರಂದು ಎಸ್ಐಟಿ ಮುಂದೆ ಹಾಜರಾಗುವುದಾಗಿ ವಿಡಿಯೋ ಬಿಡುಗಡೆ ಮಾಡಿರುವ ಬೆನ್ನಲ್ಲೇ ಎಸ್ಐಟಿ ತನಿಖೆ ಮತ್ತಷ್ಟು ಚುರುಕುಗೊಳಿಸಿದೆ.
ಹಾಸನದ ಪ್ರಜ್ವಲ್ ರೇವಣ್ಣ ನಿವಾಸ ಸೇರಿದಂತೆ ಮೂರು ಕಡೆ ಎಫ್ ಎಸ್ ಎಲ್ ಹಾಗೂ ಎಸ್ಐಟಿ ಅಧಿಕಾರಿಗಳ ತಂಡ ಭೇಟಿ ನೀಡಿ ಶೋಧ ನಡೆಸಿವೆ. ಹಾಸನದ ಸಂಸದರ ನಿವಾಸ, ಹೊಳೆನರಸೀಪುರದ ಹೆಚ್.ಡಿ.ರೇವಣ್ಣ ನಿವಾಸ, ಚನ್ನರಾಯಪಟ್ಟಣದ ಗನ್ನಿಕಡದ ತೋಟದ ಮನೆಯಲ್ಲಿ ಪರಿಶೀಲಿಸಲಾಗಿದ್ದು, ಅತ್ಯಾಚಾರವಾಗಿದೆ ಎಂದು ಆರೋಪಿಸಿದ ಸ್ಥಳಗಳಲ್ಲಿ ಪರಿಶೀಲಿಸಲಾಗಿದೆ.
ಬರೋಬ್ಬರಿ 10 ಗಂಟೆಗಳ ಕಾಲ ಅಧಿಕಾರಿಗಳು ಶೋಧ ನಡೆಸಿದ್ದು, ಪ್ರಜ್ವಲ್ ರೇವಣ್ಣ ರೂಮಿನಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ, ರೂಂ ನ ವಿವಿಧೆಡೆಯ ಬೆರಳಚ್ಚು ಸಂಗ್ರಹಿಸಿ ಎಫ್ ಎಸ್ ಎಲ್ ಗೆ ರವಾನಿಸಲಾಗಿದೆ.