ಕಲಬುರ್ಗಿ: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡನೇ ಬಾರಿ ಪತ್ರ ಬರೆದು, ಪ್ರಜ್ವಲ್ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದು ಮಾಡುವಂತೆ ಒತ್ತಾಯಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, ಸಿಎಂ ಸಿದ್ದರಾಮಯ್ಯ ಪತ್ರ ಬರೆದಾಕ್ಷಣ ಪಾಸ್ ಪೋರ್ಟ್ ರದ್ದು ಮಾಡಲಾಗಲ್ಲ, ಅದಕ್ಕೆ ಕಾನೂನು ಕ್ರಮ ಇರುತ್ತದೆ ಎಂದು ಟಾಂಗ್ ನೀಡಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪಾಸ್ ಪೋರ್ಟ್ ರದ್ದತಿಗೆ ಅದರದ್ದೇ ಆದ ಪ್ರಕ್ರಿಯೆಗಳಿವೆ. ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದತಿಗೆ ಕೋರ್ಟ್ ನಲ್ಲಿ ಅರ್ಜಿ ಹಾಕಲಾಗಿದೆ ಎಂದರು.
ಪ್ರಜ್ವಲ್ ರೇವಣ್ಣ ಪಾಸ್ ಪೋರ್ಟ್ ಬಗ್ಗೆ ಕೇಂದ್ರ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದೆ. ಆದರೆ ನನ್ನ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಪರಮೇಶ್ವರ್ ಉತ್ತರಿಸಿಲ್ಲ. ಪ್ರಜ್ವಲ್ ಪೆನ್ ಡ್ರೈವ್ ಹೊರಬಂದಿದ್ದು ಏಪ್ರಿಲ್ 21ರಂದು. ಆದರೆ ಪ್ರಜ್ವಲ್ ವಿದೇಶಕ್ಕೆ ಹೋಗಿದ್ದು ಏಪ್ರಿಲ್ 27ರಂದು ಹಾಗಾದರೆ ಅಲ್ಲಿಯವರೆಗೆ ಇವರೇನು ಕತ್ತೆ ಕಾಯುತ್ತಿದ್ದರಾ? ಎಂದು ಪ್ರಶ್ನಿಸಿದ್ದಾರೆ.