ಹುಬ್ಬಳ್ಳಿ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧಿಸಲ್ಪಟ್ಟಿರುವ ಪ್ರಜ್ವಲ್ ರೇವಣ್ಣ ಕ್ಷಮೆಗೆ ಅರ್ಹನಲ್ಲ. ಪೆನ್ ಡ್ರೈವ್ ಪ್ರಕರಣದಲ್ಲಿ ತನಿಖೆ ನಡೆಸಿ ಅತ್ಯುಗ್ರವಾದಂತಹ ಶಿಕ್ಷೆ ವಿಧಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಪ್ರಜ್ವಲ್ ರೇವಣ್ಣ ಯಾವ ಕಾರಣಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಿದ್ದಾರೆ ಗೊತ್ತಿಲ್ಲ. ಆದರೆ, ಅವರು ಕ್ಷಮೆಗೆ ಅರ್ಹರಲ್ಲ ಎಂದರು.
ಮಹಿಳೆಯರನ್ನು ಉನ್ನತ ಸ್ಥಾನದಲ್ಲಿರಿಸಿ, ಅತ್ಯಂತ ಗೌರವದಿಂದ ನೋಡುವ ಭಾರತ ದೇಶದಲ್ಲಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಹೇಸಿಗೆ ತರಿಸುತ್ತದೆ ಎಂದು ಕಿಡಿಕಾರಿದರು.
ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಈವರೆಗೆ ನಡೆದುಕೊಂಡ ರೀತಿ ಅಕ್ಷಮ್ಯ. ಸಂತ್ರಸ್ತರ ಕ್ಷಮೆ ಕೇಳುತ್ತಾರೋ, ಬಿಡುತ್ತಾರೋ ಆದರೆ, ಇದೊಂದು ಘನಘೋರ ಕೃತ್ಯ. ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಯಾಗಲೇಬೇಕು. ಇದು ಬಿಜೆಪಿಯ ಸ್ಪಷ್ಟ ನಿಲುವು ಎಂದು ಹೇಳಿದರು.
ಭಾರತೀಯ ನ್ಯಾಯಾಂಗ ವ್ಯವಸ್ಥೆ ಬಲಿಷ್ಠವಾಗಿದೆ. ತ್ವರಿತವಾಗಿ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ಆರೋಪಿಗೆ ಶೀಘ್ರವೇ ಅತ್ಯುಗ್ರ ಶಿಕ್ಷೆ ವಿಧಿಸಲಿ ಎಂದರು.