ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಎಸ್ಐಟಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದು, ಪ್ರಕರಣದಲ್ಲಿ ಸಂತ್ರಸ್ತೆಯರ ಗುರುತಿಸಿ ವಿಚಾರಣೆ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಜ್ವಲ್ ಲೈಂಗಿಕ ದೌರ್ಜನ್ಯದ ವಿಡಿಯೋ ಆಧರಿಸಿ ಸಂತ್ರಸ್ತೆಯರನ್ನು ಪತ್ತೆ ಮಾಡಿ ಅವರ ಹೇಳಿಕೆ ದಾಖಲಿಸಿಕೊಂಡಿದೆ. ಇವರಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು, ಜನಪ್ರತಿನಿಧಿಗಳು ಕೂಡ ಇದ್ದಾರೆ.
ಅಭಿವೃದ್ಧಿ ಕಾರ್ಯಗಳ ಚರ್ಚೆ, ಅನುದಾನ, ಗುತ್ತಿಗೆ ಕೊಡಿಸುವುದು, ವರ್ಗಾವಣೆ ಮಾಡಿಸುವುದು ಸೇರಿದಂತೆ ಹಲವು ಕಾರಣಗಳಿಂದ ಭೇಟಿ ಮಾಡಿದ ಸಂದರ್ಭದಲ್ಲಿ ಪ್ರಜ್ವಲ್ ಸಹಾಯದ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆಯರು ಹೇಳಿಕೆ ನೀಡಿದ್ದಾರೆ.
ರಾತ್ರಿ ವೇಳೆ ಕರೆ ಮಾಡುತ್ತಿದ್ದ ಪ್ರಜ್ವಲ್ ಮಾತನಾಡುವಂತೆ ಪ್ರಚೋದಿಸುತ್ತಿದ್ದರು. ಒಮ್ಮೊಮ್ಮೆ ವಿಡಿಯೋ ಕರೆ ಮಾಡಿ ಬೆತ್ತಲಾಗುವಂತೆ ಪೀಡಿಸುತಿದ್ದರು. ವರ್ಗಾವಣೆ, ಇಲಾಖೆ ವಿಚಾರಗಳ ಮಾತನಾಡುವ ನೆಪದಲ್ಲಿ ಕರೆಸಿಕೊಂಡು ಬೆದರಿಸಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ತಮ್ಮ ಮೇಲೆ ಅತ್ಯಾಚಾರ ನಡೆದಿರುವುದು ನಿಜ ಎಂದು ಮಹಿಳಾ ಅಧಿಕಾರಿಗಳಿಬ್ಬರು ಸ್ವಿಚ್ಚೆಯಿಂದ ಹೇಳಿಕೆ ದಾಖಲಿಸಿದ್ದಾರೆ. ಎಸ್ಐಟಿಯಿಂದ ಆರಂಭಿಸಿರುವ ಸಹಾಯವಾಣಿಗೂ ಕರೆ ಮಾಡಿದ ಅನೇಕ ಸಂತ್ರಸ್ತರು ನೆರವು ಕೋರಿದ್ದಾರೆ ಎನ್ನಲಾಗಿದೆ.