ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ವಿಚಾರಣೆಗೆ ಆಸಹಕಾರ ತೋರುತ್ತಿದ್ದಾರೆ. ಹೊರಗೆ ಬಂದ ಕೂಡಲೇ ನೋಡಿಕೊಳ್ಳುವುದಾಗಿ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ ಎನ್ನಲಾಗಿದೆ.
ಅರಮನೆ ರಸ್ತೆಯ ಸಿಐಡಿ ಕೇಂದ್ರ ಕಚೇರಿಯ ಎಸ್ಐಟಿ ಸೆಲ್ ನಲ್ಲಿ ಪ್ರಜ್ವಲ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಆದರೆ, ತಮ್ಮ ಮೇಲಿನ ಅತ್ಯಾಚಾರ ಆರೋಪಗಳನ್ನು ಪ್ರಜ್ವಲ್ ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ತಮ್ಮ ವಿರುದ್ಧ ರಾಜಕೀಯ ಪಿತೂರಿಯಿಂದ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಯಾವುದೇ ತಪ್ಪನ್ನು ನಾನು ಮಾಡಿಲ್ಲ. 4 ವರ್ಷಗಳ ನಂತರ ಅತ್ಯಾಚಾರ ಪ್ರಕರಣದಲ್ಲಿ ದೂರು ಕೊಡಲು ಹಿಂದಿರುವ ಕಾರಣ ಪತ್ತೆ ಮಾಡುವಂತೆ ಹೇಳಿದ್ದಾರೆ. ನಮ್ಮ ಮನೆಯಲ್ಲಿ ಅನೇಕ ಮಂದಿ ಕೆಲಸ ಮಾಡುತ್ತಿದ್ದರು. ಅವರ ಬಗ್ಗೆ ಮಾಹಿತಿ ಗೊತ್ತಿಲ್ಲ. ತಿರುಚಿದ ವಿಡಿಯೋಗಳನ್ನು ಹರಿಬಿಟ್ಟು ತೇಜೋವಧೆ ಮಾಡುತ್ತಿದ್ದಾರೆ. ಈ ವಿಡಿಯೋಗಳ ಹಿಂದಿರುವ ಕಾರ್ತಿಕ್ ಸೇರಿ ಇತರರನ್ನು ಬಂಧಿಸಿ ವಿಚಾರಣೆ ನಡೆಸಿದರೆ ಸತ್ಯ ಗೊತ್ತಾಗುತ್ತದೆ ಎಂದು ಪ್ರಜ್ವಲ್ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಶೀಘ್ರವೇ ಪ್ರಜ್ವಲ್ ರೇವಣ್ಣ ಅವರನ್ನು ಘಟನಾ ಸ್ಥಳಗಳ ಮಹಜರು ಸಲುವಾಗಿ ಹಾಸನಕ್ಕೆ ಕರೆದುಕೊಂಡು ಹೋಗಲಾಗುವುದು ಎಂದು ಹೇಳಲಾಗಿದೆ.