ಹಾಸನ: ಹಾಸನ ಲೋಕಸಭೆ ಸದಸ್ಯ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅವರನ್ನು ಹೈಕೋರ್ಟ್ ಅನರ್ಹಗೊಳಿಸಿದೆ. ಸಂಸದ ಸ್ಥಾನದಿಂದ ವಜಾಗೊಂಡ ನಂತರ ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ನ್ಯಾಯಾಲಯದ ತೀರ್ಪಿಗೆ ಎಲ್ಲರೂ ತಲೆಬಾಗಬೇಕು ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ. ಹೈಕೋರ್ಟ್ ತೀರ್ಪಿನ ನಂತರ ಮೊದಲ ಪ್ರತಿಕ್ರಿಯೆ ನೀಡಿದ ಅವರು, ಮುಂದೆ ಏನು ಮಾಡಬೇಕೆಂದು ತಾತಾ ಮತ್ತು ಅಪ್ಪನ ಜೊತೆ ಮಾತನಾಡುತ್ತೇನೆ. ನನ್ನ ವಿರುದ್ಧ ಹಲವು ಕಾರಣ ನೀಡಿ ದೂರು ನೀಡಲಾಗಿತ್ತು. ಹಾಗಾಗಿ ಯಾವ ದೂರಿನಲ್ಲಿ ತೀರ್ಪು ಬಂದಿದೆ ಎಂಬುದನ್ನು ನೋಡಬೇಕು ಎಂದು ಹೇಳಿದ್ದಾರೆ.
ವಕೀಲರ ಜೊತೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಮಾಡುತ್ತೇವೆ. ಕಾನೂನಾತ್ಮಕವಾಗಿ ಏನು ಮಾಡಬೇಕೋ ಅದನ್ನು ಮಾಡೇ ಮಾಡುತ್ತೇವೆ. ಚುನಾವಣೆ ಸಂದರ್ಭದಲ್ಲಿ ಅಗತ್ಯವಿರುವ ದಾಖಲೆಗಳನ್ನು ನೀಡಿದ್ದೆವು. ಸಂಸದ ಸ್ಥಾನದಿಂದ ಕೋರ್ಟ್ ಅಸಿಂಧುಗೊಳಿಸಿದೆ ಅಷ್ಟೇ, ಆರು ವರ್ಷ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ಕೋರ್ಟ್ ಹೇಳಿಲ್ಲ. ಇದೆಲ್ಲ ದೇವರ ಪರೀಕ್ಷೆ ಅಷ್ಟೇ, ಮುಂದೆ ಏನಾಗುತ್ತದೆ ನೋಡೋಣ. ದೇವರ ಆಶೀರ್ವಾದವಿದೆ, ಜನರ ಅನುಗ್ರಹವಿದೆ ಎಂದು ಪ್ರಜ್ವಲ್ ರೇವಣ್ಣ ಹೇಳಿದ್ದಾರೆ.