ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಜ್ವಲ್ ತಪ್ಪಿಸಿಕೊಂಡಿದ್ದರೆ ಕರೆದುಕೊಂಡು ಬರಲಿ. ಆತ ತಪ್ಪಿಸಿಕೊಂಡಿರುವುದಕ್ಕೂ ನನಗೂ ಸಂಬಂಧವಿಲ್ಲ. ಚುನಾವಣೆ ವೇಳೆಯಲ್ಲಿ ಈ ರೀತಿ ಆಗಿದೆ. ತನಿಖೆಯಾಗಿ ಸತ್ಯಾಸತ್ಯತೆ ಹೊರಬರಲಿ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ.
ನಾನಾಗಲೀ ದೇವೇಗೌಡರಾಗಲಿ ಎಂದಿಗೂ ಹೆಣ್ಣು ಮಕ್ಕಳ ವಿಚಾರದಲ್ಲಿ ಗೌರವಯುತವಾಗಿ ನಡೆದುಕೊಂಡಿದ್ದೇವೆ. ಕಷ್ಟ ಹೇಳಿಕೊಂಡು ಯಾರಾದರೂ ಬಂದರೆ ಪರಿಹರಿಸಿ ಕಳುಹಿಸಿದ್ದೇವೆ. ನಾವಂತೂ ಮಹಿಳೆಯರಿಗೆ ಹೆಚ್ಚಿನ ಗೌರವ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
ಕಾನೂನಿನಲ್ಲಿ ಯಾರೇ ತಪ್ಪು ಮಾಡಿದರೂ ತಪ್ಪೇ. ಉಪ್ಪು ತಿಂದವರು ನೀರು ಕುಡಿಯಬೇಕು. ಈ ವಿಚಾರದಲ್ಲಿ ಯಾರನ್ನೂ ಕ್ಷಮಿಸುವ ಪ್ರಶ್ನೆ ಇಲ್ಲ. ತನಿಖಾ ವರದಿ ಹೊರಗೆ ಬಂದ ಬಳಿಕ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.