ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ತನಿಖೆಗೆ ಸಹಕರಿಸದೆ ಮೊಂಡಾಟ ಮುಂದುವರೆಸಿದ್ದಾರೆ.
ಎಸ್ಐಟಿ ಅಧಿಕಾರಿಗಳು ಹಾಸನದ ವಿವಿಧ ಸ್ಥಳಗಳಲ್ಲಿ ಸೋಮವಾರ ಸ್ಥಳ ಮಹಜರು ನಡೆಸಲು ನಿರ್ಧರಿಸಿದ್ದಾರೆ. ಮಂಗಳವಾರ ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು, ಪ್ರಜ್ವಲ್ ರೇವಣ್ಣ ಜಯಗಳಿಸಿದ್ದಲ್ಲಿ ಅವರ ಬೆಂಬಲಿಗರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸ್ಥಳ ಮಹಜರು ಪ್ರಕ್ರಿಯೆಗೆ ಅಡ್ಡಿಪಡಿಸುವ ಸಾಧ್ಯತೆ ಇರುವುದರಿಂದ ಸೋಮವಾರವೇ ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಲು ಎಸ್ಐಟಿ ನಿರ್ಧರಿಸಿದೆ ಎನ್ನಲಾಗಿದೆ.
ಅತ್ಯಾಚಾರ ನಡೆದಿದೆ ಎನ್ನಲಾದ ಹಾಸನದ ಸಂಸದರ ಸರ್ಕಾರಿ ನಿವಾಸ, ತೋಟದ ಮನೆ, ಹೊಳೆನರಸೀಪುರದಲ್ಲಿರುವ ಹೆಚ್.ಡಿ. ರೇವಣ್ಣ ಅವರ ಮನೆಯಲ್ಲಿ ಪರಿಶೀಲನೆ ನಡೆಸಲಾಗುತ್ತದೆ. ಪ್ರಜ್ವಲ್ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತದೆ. ಮಹಜರು ಪೂರ್ಣಗೊಂಡಲ್ಲಿ ಮುಂದಿನ ಹಂತದ ಪ್ರಕ್ರಿಯೆಗಳು ಮುಂದುವರೆಯಲಿವೆ ಎಂದು ಹೇಳಲಾಗಿದೆ.
ಮಲಗಲು ಒಳ್ಳೆಯ ಕೊಠಡಿ ವ್ಯವಸ್ಥೆ ಮಾಡಿ, ಉತ್ತಮ ಶೌಚಾಲಯದ ವ್ಯವಸ್ಥೆ ಕಲ್ಪಿಸಿ ಎಂದು ಪ್ರಜ್ವಲ್ ರೇವಣ್ಣ ಐಷಾರಾಮಿ ಆತಿಥ್ಯಕ್ಕೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಒಪ್ಪದ ಅಧಿಕಾರಿಗಳು ನಿಮ್ಮ ತಂದೆಯವರು ಕೂಡ ಇದೇ ರೂಂ ಬಳಸಿದ್ದಾರೆ ಎಂದು ತಿಳಿಸಿದ್ದಾರೆ.