ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವನ್ನು ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಇನ್ನೂ ಕೆಲವೇ ಹೊತ್ತಲ್ಲಿ ಅಧಿಕೃತವಾಗಿ ಎಸ್ಐಟಿ ರಚನೆ ಆಗಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮಹಿಳಾ ಆಯೋಗದ ಪತ್ರ ಹಿನ್ನೆಲೆಯಲ್ಲಿ ತನಿಖೆಗೆ ಸೂಚನೆ ನೀಡಲಾಗಿದೆ. ಪ್ರಜ್ವಲ್ ದೇಶ ಬಿಟ್ಟು ಹೋದ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದಾರೆ.
ಸಂತ್ರಸ್ತರನ್ನು ಮಹಿಳಾ ಆಯೋಗ ಸಂಪರ್ಕಿಸುವ ಬಗ್ಗೆ ಹೇಳಿದೆ. ಎಸ್ಐಟಿ ರಚನೆಯಾದ ಬಳಿಕ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗುವುದು. ಸರ್ಕಾರದ ಹಸ್ತಕ್ಷೇಪ ಇಲ್ಲದೆ ಈ ಪ್ರಕರಣದ ತನಿಖೆ ನಡೆಯಲಿದೆ. ಪ್ರಜ್ವಲ್ ಗೆ ನೋಟಿಸ್ ಕೊಡುವುದು ಎಸ್ಐಟಿಗೆ ಬಿಟ್ಟದ್ದು. ಎಸ್ಐಟಿಯೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.