ಬೆಂಗಳೂರು: ಅತ್ಯಾಚಾರ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ವೇಳೆ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳ ಬಗ್ಗೆ ಮಾಹಿತಿ ನೀಡದೆ ಸತಾಯಿಸುತ್ತಿದ್ದಾರೆ ಎನ್ನಲಾಗಿದೆ.
ನನ್ನ ಬಳಿ ಮೊಬೈಲ್ ಇಲ್ಲ, ಆಪ್ತ ಸಹಾಯಕರು, ಚಾಲಕರು, ಕಾರ್ಯಕರ್ತರ ಮೊಬೈಲ್ ಬಳಸುತ್ತಿದ್ದೆ ಎಂದು ಎಸ್ಐಟಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. ನನ್ನ ಬಳಿ ಯಾವುದೇ ಸ್ವಂತ ಮೊಬೈಲ್ ಅಥವಾ ಸಿಮ್ ಕಾರ್ಡ್ ಇಲ್ಲ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ತಮ್ಮ ಗೆಳತಿಗೆ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ಪ್ರಜ್ವಲ್ ರೇವಣ್ಣ ಕೊಡಿಸಿರುವುದು ತನಿಖೆಯಲ್ಲಿ ಗೊತ್ತಾಗಿದ್ದು, ಶೀಘ್ರದಲ್ಲೇ ಪ್ರಜ್ವಲ್ ಗೆಳತಿಯನ್ನು ಕೂಡ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಇಂದು ಪ್ರಜ್ವಲ್ ರೇವಣ್ಣ ಅವರ ಕಸ್ಟಡಿ ಅವಧಿ ಮುಗಿಯಲಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಮತ್ತೆ ಕಸ್ಟಡಿಗೆ ನೀಡುವಂತೆ ಎಸ್ಐಟಿ ಕೋರಲಿದೆ.