ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ನಾಯಕರ ಸಭೆ ವೇಳೆ ಸಭೆಗೆ ನುಗ್ಗಿ ಗಲಾಟೆ ಮಾಡಿರುವ ಘಟನೆ ನಡೆದಿದೆ.
ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಕೋರ್ ಕಮಿಟಿ ಸಭೆ ನಡೆಯಿತು. ಸಭೆ ಮುಗಿದ ಬಳಿಕ ಸಮನ್ವಯ ಸಮಿತಿ ಸಭೆ ನಿಟ್ಟಿನಲ್ಲಿ ನಾಯಕರು ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಹೋಟೆಲ್ ಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಧಿಕ್ಕಾರ ಕೂಗಿದರು.
ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ವಾಪಾಸ್ ಕರೆಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯುತ್ತಿದ್ದಂತೆ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಗಲಾಟೆಯಾಗಿದೆ. ಕೈಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ಈ ವೇಳೆ ಜೆಡಿಎಸ್ ನಾಯಕರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಸಮಾಧಾನಪಡಿಸಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಶಾಸಕ ಸಾ.ರಾ.ಮಹೇಶ್, ಕಾಂಗ್ರೆಸ್ ಕಾರ್ಯಕರ್ತರಿಗೆ ಇಲ್ಲಿಗೆ ಬಂದು ಪ್ರತಿಭಟಿಸಲು ಹೇಳಿದ್ದು ಯಾರು? ನಾವು ಸಮನ್ವಯ ಸಮಿತಿ ಸಭೆಗೆ ತೆರಳುತ್ತಿದ್ದ ವೇಳೆ ನುಗ್ಗಿ ಗಲಾಟೆ ಮಾಡಿದ್ದಾರೆ. ಅವಾಚ್ಯವಾಗಿ ನಿಂದಿಸಲಾರಂಭಿಸಿದಾಗ ಜೆಡಿಎಸ್ ಕಾರ್ಯಕರ್ತರು ತಡೆಯುತ್ತಿದ್ದಂತೆ ಚಪ್ಪಲಿ ಎಸೆದು ಧಿಕ್ಕಾರ ಕೂಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.