ಮೈಸೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ನಾಯಕರು ಪಟ್ಟು ಹಿಡಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇಲ್ವಾ? ಎಂದು ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಸಿಎಂ ಸಿದ್ದರಾಮಯ್ಯ, ಪ್ರಕರಣವನ್ನು ಎಸ್ಐಟಿ ತನಿಖೆಗೆವಹಿಸಲಾಗಿದೆ. ನನಗೆ ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇದೆ. ಅಧಿಕಾರಿಗಳು ತನಿಖೆ ನಡೆಸಿ ವರದಿ ಕೊಡುತ್ತಾರೆ. ಬಿಜೆಪಿಯವರಿಗೆ ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇಲ್ವಾ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಈ ಹಿಂದೆ ಸಿಬಿಐ ನ್ನು ‘ಕರೆಪ್ಶನ್ ಬ್ಯೂರೋ ಇನ್ವೆಸ್ಟಿಗೇಷನ್’ ಎಂದು ಕರೆಯುತ್ತಿದ್ದರು. ದೇವೇಗೌಡರು ‘ಚೋರ್ ಬಚಾವೋ ಸಂಸ್ಥೆ’ ಎಂದು ಕರೆದಿದ್ದರು. ಈಗ ಇದ್ದಕ್ಕಿದ್ದಂತೆ ಸಿಬಿಐ ಮೇಲೆ ಪ್ರೀತಿ ಬಂದಿದೆ ಯಾಕೆ? ಎಂದರು. ಇದರಲ್ಲಿ ಅಂತರಾಷ್ಟ್ರೀಯ ಮಟ್ಟದ ತನಿಖೆ ಬರಲ್ಲ. ಈ ಹಿಂದೆ ಹಲವು ಕೇಸ್ ಗಳನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ ಏನಾಯಿತು? ಸಿಬಿಐ ಬಗ್ಗೆ ನಂಬಿಗೆ ಬೇಡ ಎನ್ನುತ್ತಿಲ್ಲ, ನಂಬಿಕೆ ಇರಲಿ. ಆದರೆ ನಮ್ಮ ಪೊಲೀಸ್ ಬಗ್ಗೆಯೂ ನಂಬಿಕೆ ಇಡಬೇಕು. ನಮಗೆ ನಮ್ಮ ಪೊಲೀಸರ ಬಗ್ಗೆ ನಂಬಿಕೆ ಇದೆ. ಸೂಕ್ತ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ ಆಗುತ್ತೆ ಎಂದು ಹೇಳಿದರು.