ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣದ ಪ್ರಮುಖ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ಮೇ 16 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಹಿಳೆ ಅಪಹರಣ ಪ್ರಕರಣದಲ್ಲಿ ಜೈಲು ಸೇರಿದ್ದ ತಮ್ಮ ತಂದೆ ಹೆಚ್.ಡಿ. ರೇವಣ್ಣ ಅವರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಮೇ 15ರಂದು ಜರ್ಮನಿಯ ಮ್ಯೂನಿಚ್ ನಗರದಿಂದ ಪ್ರಯಾಣ ಬೆಳೆಸಲಿದ್ದಾರೆ. ಅವರು ಮೇ 16ರಂದು ಬೆಂಗಳೂರಿಗೆ ಆಗಮಿಸಿ ನ್ಯಾಯಾಲಯಕ್ಕೆ ಶರಣಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪೆನ್ ಡ್ರೈವ್ ಪ್ರಕರಣ ಬೆಳಕಿಗೆ ಬರುತ್ತಲೇ ವಿದೇಶಕ್ಕೆ ತೆರಳಿದ್ದ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿದ್ದಾರೆ ಎನ್ನಲಾಗಿದೆ. ಅವರು ನಾಳೆ ಭಾರತಕ್ಕೆ ಆಗಮಿಸಲಿದ್ದಾರೆ. ಹರಿಯಾಣದ ಅಕಲ್ ಟ್ರಾವೆಲ್ಸ್ ನಿಂದ ಪ್ರಜ್ವಲ್ ಗೆ ಟಿಕೆಟ್ ಬುಕಿಂಗ್ ಮಾಡಲಾಗಿದೆ. ಬ್ಯುಸಿನೆಸ್ ಕ್ಲಾಸ್ ನಲ್ಲಿ ಅವರ ಟಿಕೆಟ್ ಬುಕ್ ಆಗಿದ್ದು, ಮೇ 16 ರಂದು ಮಧ್ಯರಾತ್ರಿ 12:30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ಲ್ಯಾಂಡ್ ಆಗುವ ಲುಫ್ತಾನ್ಸಾ ಏರ್ಲೈನ್ಸ್ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಆಗಮಿಸಲಿದ್ದಾರೆ ಎನ್ನಲಾಗಿದೆ.