ಬಾರ್ಮರ್: ಬಹುತೇಕ ಭಾರತೀಯ ಕುಟುಂಬಗಳಲ್ಲಿ ಹೆಣ್ಣು ಮಗು ಹುಟ್ಟಿದ ದಿನದಿಂದಲೇ ಆಕೆಯ ಮದುವೆಗಾಗಿ ಉಳಿತಾಯ ಮಾಡುವುದು ಸಾಮಾನ್ಯವಾಗಿದೆ. ಇದು ಕೇವಲ ವಿವಾಹಕ್ಕೆ ಮಾತ್ರವಲ್ಲ, ವರದಕ್ಷಿಣೆಗಾಗಿ ಕೂಡ ಉಳಿತಾಯ ಮಾಡುತ್ತಾರೆ. ವರದಕ್ಷಿಣೆ ಎಂಬ ಸಾಮಾಜಿಕ ಪಿಡುಗನ್ನು ನಿಷೇಧಿಸಿರುವ ಕಾನೂನುಗಳು ಜಾರಿಯಾಗಿದ್ದರೂ ಕೂಡ, ಇನ್ನೂ ಈ ಅನಿಷ್ಠ ಪದ್ಧತಿ ನಿಂತಿಲ್ಲ.
ಕೆಲವು ಧೈರ್ಯಶಾಲಿ ಯುವಕ-ಯುವತಿಯರು ಸಾಮಾಜಿಕ ಅನಿಷ್ಟದ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಅಂತಹ ಒಂದು ಘಟನೆಯಲ್ಲಿ, ರಾಜಸ್ಥಾನದ ಬಾರ್ಮರ್‌ನ ವಧು ತನ್ನ ವರದಕ್ಷಿಣೆಗಾಗಿ ಮೀಸಲಿಟ್ಟ ಹಣವನ್ನು ಉದಾತ್ತ ಉದ್ದೇಶಕ್ಕಾಗಿ ಬಳಸಲು ದೇಣಿಗೆ ನೀಡುವಂತೆ ತಂದೆಗೆ ವಿನಂತಿಸಿದ್ದಾಳೆ.
ವರದಿಯ ಪ್ರಕಾರ, ಕಿಶೋರ್ ಸಿಂಗ್ ಕಾನೋಡ್ ಅವರ ಮಗಳು ಅಂಜಲಿ ಕನ್ವರ್ ಅವರು ನವೆಂಬರ್ 21 ರಂದು ಪ್ರವೀಣ್ ಸಿಂಗ್ ಎಂಬುವವರನ್ನು ವಿವಾಹವಾಗಿದ್ದಾರೆ. ಮದುವೆಗೆ ಮೊದಲು ಅಂಜಲಿಯು ತನ್ನ ತಂದೆಯ ಬಳಿ ಮಹತ್ತರ ವಿಷಯವನ್ನು ಮುಂದಿಟ್ಟಿದ್ದಾರೆ. ತನ್ನ ವರದಕ್ಷಿಣೆಗಾಗಿ ಮೀಸಲಿಟ್ಟ ಹಣವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬಳಸುವಂತೆ ಒತ್ತಾಯಿಸಿದ್ದಾಳೆ.
ಮದುವೆಯ ವಿಧಿವಿಧಾನಗಳು ಮುಗಿದ ನಂತರ ಅಂಜಲಿ, ಮಹಂತ್ ಪ್ರತಾಪ್ ಪುರಿ ಅವರ ಬಳಿ ವಿಷಯ ತಿಳಿಸಿದ್ದಾಳೆ. ವರದಕ್ಷಿಣೆಯ ಹಣವನ್ನು ಬಾಲಕಿಯರ ಹಾಸ್ಟೆಲ್ ನಿರ್ಮಾಣಕ್ಕೆ ಬಳಸುವಂತೆ ಪತ್ರದಲ್ಲಿ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದ್ದಾಳೆ. ಮಗಳ ಇಚ್ಛೆಗೆ ಸಮ್ಮತಿಸಿದ ಆಕೆಯ ತಂದೆ, ಅಂಜಲಿಗೆ ಖಾಲಿ ಚೆಕ್ ನೀಡಿ, ಮೊತ್ತವನ್ನು ತುಂಬುವಂತೆ ಕೇಳಿಕೊಂಡಿದ್ದಾರೆ.
ವರದಿ ಪ್ರಕಾರ, ಎನ್‌ಎಚ್ 68 ರಲ್ಲಿ ಹಾಸ್ಟೆಲ್ ನಿರ್ಮಾಣಕ್ಕೆ ಕಿಶೋರ್ ಸಿಂಗ್ ಕಾನೋಡ್ ಈಗಾಗಲೇ 1 ಕೋಟಿ ರೂ. ಅನುದಾನವನ್ನು ಘೋಷಿಸಿದ್ದರು. ಆದರೆ, ಕಾಮಗಾರಿ ಪೂರ್ಣಗೊಳಿಸಲು 50ರಿಂದ 75 ಲಕ್ಷ ರೂ. ಹೆಚ್ಚುವರಿ ಹಣ ಬೇಕಿತ್ತು. ಇದೀಗ ಅಂಜಲಿಯು ತನ್ನ ವರದಕ್ಷಿಣೆಯ 75 ಲಕ್ಷ ರೂ. ಹಣವನ್ನು ನೀಡಿರುವುದರಿಂದ ಕಾಮಗಾರಿ ಮುಂದುವರೆಸಲು ಯಾವುದೇ ಅಡ್ಡಿಯಿಲ್ಲ.
ತಂದೆ-ಮಗಳ ನಿಸ್ವಾರ್ಥ ಕಾರ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಹೆಣ್ಣುಮಕ್ಕಳ ಶಿಕ್ಷಣವನ್ನು ಬೆಂಬಲಿಸಿದ್ದಕ್ಕೆ ಇಬ್ಬರನ್ನೂ ಶ್ಲಾಘಿಸಿದ್ದಾರೆ.