ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರನ್ನು ಪೊಲೀಸ್ ಠಾಣೆಗೆ ಕರೆಸಿ ಥಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಧಾರವಾಡ ಶಹರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕಾಡದೇವರಮಠ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಹುಬ್ಬಳ್ಳಿಯ ತಮ್ಮ ನಿವಾಸಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಕಾರ್ಯಕರ್ತರನ್ನು ಕರೆಸಿಕೊಂಡ ಪ್ರಹ್ಲಾದ್ ಜೋಶಿ, ಅನಗತ್ಯವಾಗಿ ಬಿಜೆಪಿ ಕಾರ್ಯಕರ್ತರನ್ನು ಠಾಣೆಗೆ ಕರೆಸಿ ಹೊಡೆದಿದ್ದು ಯಾಕೆ? ಇದು ಕಾನೂನು ಬಾಹಿರವಲ್ಲವೇ? ಎಂದು ಕಿಡಿಕಾರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಇನ್ಸ್ ಪೆಕ್ಟರ್, ಅವರು ಇಸ್ಪೀಟ್ ಆಡುತ್ತಿದ್ದರು. ಆ ಕಾರಣಕ್ಕೆ ಎನ್ನುತ್ತಿದ್ದಂತೆ ಇಸ್ಪೀಟ್ ಆಡುತ್ತಿದ್ದರೆ ರೇಡ್ ಮಾಡಬೇಕಿತ್ತು. ಅದನ್ನು ಬಿಟ್ಟು ಠಾಣೆಗೆ ಕರೆಸಿ ಹೊಡೆಯಲು ಯಾರಿಗೂ ಅಧಿಕಾರ ಇಲ್ಲ ಎಂದು ಗದರಿದ್ದಾರೆ.
ಧಾರವಾಡದ ಗೊಲ್ಲರ ಓಣಿ ನಿವಾಸಿ ಬಿಜೆಪಿ ಕಾರ್ಯಕರ್ತ ರವಿ ಗೊಲ್ಲರ ಎಂಬುವವರನ್ನು ಠಾಣೆಗೆ ಕರೆಸಿ ಹೊಡೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿಯಾಗಿ ದೂರು ನೀಡಿದ್ದರು.