ಹುಬ್ಬಳ್ಳಿ: ಹಳೇ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ದೇಶದ ಹಿತದ ಬಗ್ಗೆ ಚಿಂತನೆ ಮಾಡುವವರಾರೂ ಈ ರೀತಿ ಮಾಡುವುದಿಲ್ಲ ಎಂದು ಕೇಂದ್ರಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಹುಬ್ಬಳ್ಳಿ ಗಲಭೆ ಕೇಸ್ ವಾಪಾಸ್ ಪಡೆದು ಸಿಎಂ ಸಿದ್ದರಾಮಯ್ಯ ಭಯೋತ್ಪಾದಕರ ಬೆಂಬಲಿಗರಾಗಿದ್ದಾರೆ. ಕಾಂಗ್ರೆಸ್ ಪಕ್ಷ ಭಯೋತ್ಪಾದಕ ಬೆಂಬಲಿತ ಪಕ್ಷವಾಗಿದೆ ಎಂದು ಕಿಡಿಕಾರಿದ್ದಾರೆ.
ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಎನ್ ಐಎಯಿಂದ ಹಿಂಪಡೆಯದಂತೆ ಬಿಜೆಪಿ ಶಾಸಕರು ಸಿಎಂಗೆ ಮನವಿ ಸಲ್ಲಿಸಲು ಮುಂದಾದರೆ ಸ್ವೀಕರಿಸಲು ಸಿದ್ಧರಿಲ್ಲ. ಸಿದ್ದರಾಮಯ್ಯ ಅತ್ಯಂತ ದುರಹಂಕಾರದಿಂದ ನಡೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗೆ ಬಿಜೆಪಿ ಮನವಿ ಸಲ್ಲಿಸುವುದು ತಪ್ಪೇ? ಸಿಎಂ ಸಿದ್ದರಾಮಯ್ಯ ಅವರು ಮನವಿ ಸ್ವೀಕರಿಸಲೇಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳುತ್ತದೆ ಎಂದು ಎಚ್ಚರಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಪ್ರಹ್ಲಾದ್ ಜೋಶಿಯವರೇ ದೊಡ್ಡ ಭಯೋತ್ಪಾದಕ ಎಂದು ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ಸಿಗರು ಭಯೋತ್ಪಾದಕರು ಎಂದು ಹೇಳುವ ಪ್ರಹ್ಲಾದ್ ಜೋಶಿಯವರೇ ಭಯೋತ್ಪಾದಕರು ಎಂದು ಹೇಳಿದರು. ಹುಬ್ಬಳ್ಳಿ ಗಲಭೆ ಪ್ರಕರಣದ ಸುಳ್ಳು ಪ್ರಕರಣವೆಂದು ನಿರ್ಧರಿಸಿ ಪ್ರಕರಣವನ್ನು ವಾಪಸ್ಸು ಪಡೆಯಲಾಗಿದೆ. ಈ ತೀರ್ಮಾನವನ್ನು ನ್ಯಾಯಾಲಯದ ಮುಂದೆ ಮಂಡಿಸಿದ ನಂತರವಷ್ಟೇ ಪ್ರಕರಣವನ್ನು ವಾಪಸ್ಸು ಪಡೆಯಲು ಸಾಧ್ಯ. ಇದೇ ರೀತಿ ಬಿಜೆಪಿಯವರ ವಿರುದ್ಧ ಪ್ರಕರಣಗಳನ್ನೂ ಸಹ ವಾಪಸ್ಸು ಪಡೆಯಲಾಗಿದೆ. ಬಿಜೆಪಿಯವರು ಕೂಡ ಹಲವು ಪ್ರಕರಣಗಳನ್ನು ವಾಪಾಸ್ ಪಡೆದಿದ್ದರು ಎಂದರು.