ಹುಬ್ಬಳ್ಳಿ: ಮೊನ್ನೆಯಷ್ಟೇ ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಪ್ರಕರಣ ನಡೆದಿರುವಾಗಲೇ ಈಗ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ನಡೆದಿದೆ. ಭಯೋತ್ಪಾದಕ, ಉಗ್ರ ಚಟುವಟಿಕೆಗಳಿಗೆ ಇಂದು ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕ ಸ್ವರ್ಗವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಗಂಭೀರ ಆರೋಪ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮತ್ತು ಹೋಟೆಲ್ ಸ್ಫೋಟಕ್ಕೆ ಸಿಎಂ, ಡಿಸಿಎಂ ನೇರ ಹೊಣೆಗಾರರು ಎಂದರು. ದೇಶದಲ್ಲಿ ಶೇ.90ರಷ್ಟು ಉಗ್ರ ಚಟುವಟಿಕೆ ನಿಗ್ರಹವಾಗಿದೆ. ಆದರೆ, ಈಗ ತಮಗೆ ಬೆಂಬಲ ಸಿಗಬಹುದಾದಂತಹ ರಾಜ್ಯಗಳಲ್ಲಿ ಮತ್ತೆ ಉಗ್ರರ ಚಟುವಟಿಕೆಗಳು ನಡೆಯುತ್ತಿವೆ. ಕಾಂಗ್ರೆಸ್ ಆಡಳಿತ ಇರುವುದರಿಂದ ಭಯೋತ್ಪಾದಕರಿಗೆ ದಾಳಿ ನಡೆಸಲು ಇಂದು ಕರ್ನಾಟಕ ಸುರಕ್ಷಿತ ತಾಣ ಎನಿಸಿದೆ. ಕೇವಲ ವೋಟ್ ಬ್ಯಾಂಕ್ ಗಾಗಿ ಕರ್ನಾಟಕವನ್ನು ಉಗ್ರರ ತಾಣ ಮಾಡಬೇಡಿ ಎಂದು ಗುಡುಗಿದರು.
ರಾಜ್ಯದಲ್ಲಿ ನಡೆದ ಎರಡೂ ಘಟನೆಗಳು ರಾಜ್ಯದಲ್ಲಿ ಆಡಳಿತ ಮತ್ತು ಆಂತರಿಕ ಭದ್ರತೆ ವೈಫಲ್ಯಕ್ಕೆ ನಿದರ್ಶನ. ಎರಡೂ ಪ್ರಕಾರಣವನ್ನು ರಾಜ್ಯ ಸರ್ಕಾರ ಕೂಡಲೇ ಎನ್ ಐಎ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.