ಹುಬ್ಬಳ್ಳಿ: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಪ್ರಜ್ವಲ್ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತನಿಖೆ ಸಮರ್ಪಕವಾಗಿ ಸಾಗುತ್ತಿಲ್ಲ. ಹಾಗಾಗಿ ತನಿಖೆಯನ್ನು ಸಿಬಿಐಗೆ ವಹಿಸಲಿ. ಇಲ್ಲವೇ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಲಿ ಎಂದು ಹೇಳಿದರು.
ಪ್ರಜ್ವಲ್ ಪ್ರಕರಣದಲ್ಲಿ ಸಾಕಷ್ಟು ಗೊಂದಲವಿದೆ, ಆದರೂ ನಮ್ಮ ನಿಲುವು ಸ್ಪಷ್ಟವಾಗಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಆದರೆ ನಿಸ್ಪಕ್ಷಪಾತ ತನಿಖೆಯಾಗಬೇಕು. ಏಪ್ರಿಲ್ 21ರಂದು ವಿಡಿಯೋಗಳು ಬಹಿರಂಗವಾಗಿವೆ. ಹಾಸನ ಮಾತ್ರವಲ್ಲ, ಹುಬ್ಬಳ್ಳಿಯಲ್ಲಿಯೂ ಬಹಿರಂಗವಾಗಿದೆ. ರಾಜ್ಯ ಸರ್ಕಾರ ಆಗ ಯಾಕೆ ಎಫ್ ಐ ಆರ್ ದಾಖಲಿಸಿಲ್ಲ? ಪ್ರಜ್ವಲ್ ವಿದೇಶಕ್ಕೆ ಹೋಗುವುದನ್ನು ಯಾಕೆ ತಡೆಯಲಿಲ್ಲ? ಇದಕ್ಕೆ ಸರ್ಕಾರವೇ ಉತ್ತರ ನೀಡಬೇಕು ಎಂದರು.
ಇನ್ನು ರೇವಣ್ಣ ವಿರುದ್ಧದ ಪ್ರಕರಣದ ಬಗ್ಗೆ ಅನುಮಾನವಿದೆ. ಮಹಿಳೆಯ ಅಪಹರಣಕ್ಕೆ ಸೂಕ್ತ ದಾಖಲೆಗಳೇ ಇಲ್ಲ. ಅತಿದೊಡ್ಡ ಪ್ರಕರಣ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಜಗತ್ತಿನ ಅತಿ ದೊಡ್ಡ ಪ್ರಕರಣವನ್ನು ಯಾಕೆ ಸಿಬಿಐ ತನಿಖೆಗೆ ವಹಿಸುತ್ತಿಲ್ಲ? ಕೆಲವರನ್ನು ರಾಜಕೀಯವಾಗಿ ಮುಗಿಸಲು ಪ್ರಕರಣವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕಿಡಿಕಾರಿದರು.