ವಿಜಯಪುರ: ಹುಬ್ಬಳ್ಳಿಯಲ್ಲಿ ರಾಮಜನ್ಮಭೂಮಿಗಾಗಿ ಹೋರಾಟ ನಡೆಸಿದ್ದ ಕರಸೇವಕರ ಬಂಧನ ಪ್ರಕರಣ ಸಂಬಂಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಇದೊಂದು ದ್ವೇಷದ ರಾಜಕಾರಣ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
31 ವರ್ಷಗಳ ಬಳಿಕ ಕರಸೇವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರವಾಗಿ ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, 72ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ದ್ವೇಷದ ಭಾವನೆಯಿಂದ ವರ್ತಿಸುತ್ತಿದ್ದಾರೆ. ಹೊಟ್ಟೆಕಿಚ್ಚಿನಿಂದ ಕಾಂಗ್ರೆಸ್ ಸರ್ಕಾರ ಈ ರೀತಿ ವರ್ತಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ಕೇಸ್ ವಿಚಾರವಾಗಿ ಕಾನೂನು, ಸಾಮಾಜಿಕ ಹಾಗೂ ರಾಜಕೀಯವಾಗಿಯೂ ಹೋರಾಟ ಮಾಡುತ್ತೇವೆ. ರಾಮ ಮಂದಿರದ ರಿವೇಂಜ್ ತೀರಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರೇ ಏನು ಮಾಡುತ್ತಿದ್ದೀರಾ? ಮೊಘಲ್ ಸರ್ಕಾರ, ಐಸಿಸ್ ಸರ್ಕಾರ ಮಾಡಲು ಹೊರಟಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಗೆ ರಾಮ ಮಂದಿರದ ಪರಿಕಲ್ಪನೆಯೂ ಇರಲಿಲ್ಲ. ಕಾಂಗ್ರೆಸ್ ಗೆ ಹೊಟ್ಟೆ ಕಿಚ್ಚು ಆತಂಕ ಶುರುವಾಗಿದೆ. ರಾಮ ಮಂದಿರಕ್ಕೆ ಹೋಗಬೇಕೋ? ಬೇಡವೋ? ಎಂಬ ಗೊಂದಲದಲ್ಲಿ ಕಾಂಗ್ರೆಸ್ ನವರು ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.