![](https://kannadadunia.com/wp-content/uploads/2022/02/parliamentary-affairs-minister-pralhad-joshi-pti1-881625-1599067823.jpg)
ನವದೆಹಲಿ: ಕಾಂಗ್ರೆಸ್ ದೆಹಲಿ ಚುನಾವಣೆಯಿಂದಯಾದರೂ ಪಾಠ ಕಲಿಯಬೇಕು. ಸದನದಲ್ಲಿ ಅನಗತ್ಯ ಗದ್ದಲ ಎಬ್ಬಿಸಿ ಸ್ಥಗಿತಗೊಳಿಸುವುದನ್ನು ನಿಲ್ಲಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸಂಸತ್ ಆವರಣದಲ್ಲಿ ಮಾತನಾಡಿದ ಅವರು, ಸದನದಲ್ಲಿ ಒಂದು ಪಕ್ವ ವಿಪಕ್ಷವಾಗಿ ಕಾಂಗ್ರೆಸ್ ವರ್ತಿಸಲಿ ಎಂದು ಸಲಹೆ ನೀಡಿದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಒಂದು ರಾಷ್ಟ್ರೀಯ ಪಕ್ಷವಾಗಿ ಶೂನ್ಯ ಸಂಪಾದನೆ ಸಾಧಿಸಿದೆ. ಇದು ಅವರ ಹಿಂಸಾಚಾರ ಪ್ರಚೋದನೆಗೆ ಸಿಕ್ಕ ಪ್ರತ್ಯುತ್ತರ. ದೆಹಲಿಯಲ್ಲಿ ಹ್ಯಾಟ್ರಿಕ್ ಆಡಳಿತ ನಡೆಸಿದಂತಹ ಕಾಂಗ್ರೆಸ್ ಪಕ್ಷ ಈಗ ಹ್ಯಾಟ್ರಿಕ್ ಆಗಿಯೇ ಶೂನ್ಯ ಸಂಪಾದನೆ ಮಾಡಿದೆ. ಶೇ.45-50ರಷ್ಟು ಮತ ಪಡೆಯುತ್ತಿದ್ದವರು ಈಗ ಇಂಥ ಹೀನಾಯ ಸ್ಥಿತಿ ತಲುಪಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್, ಲೋಕಸಭೆಯಲ್ಲಿ ಮತ್ತು ವಿಧಾನಸಭೆಗಳಲ್ಲಿ ಒಂದು ರಚನಾತ್ಮಕ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕು. ಆಡಳಿತ ಪಕ್ಷದೊಂದಿಗೆ ಒಂದು ಪಕ್ವ ವಿಪಕ್ಷವಾಗಿ ಇರಬೇಕು. ಮುಂದಿನ ದಿನಗಳಲ್ಲಿಯಾದರೂ ಕಾಂಗ್ರೆಸ್ ನಾಯಕರು ಈ ನಿಟ್ಟಿನಲ್ಲಿ ಹೆಜ್ಜೆಯಿಡಲಿ ಎಂದು ಸಲಹೆ ಮಾಡಿದರು.
ಸಂಸತ್ ಕಲಪದ ವೇಳೆ ಸುಗಮ ಕಲಾಪಕ್ಕೆ ಅಡ್ಡಿ, ಹಿಂಸಾಚಾರ ಪ್ರಚೋದನೆ, ಸದನದಲ್ಲಿ ಅನಗತ್ಯ ಗದ್ದಲ, ಸುಗಮವಾಗಿ ಸದನ ನಡೆಯಲು ಬಿಡದೇ ಇರುವುದು ಇದೆಲ್ಲವನ್ನೂ ಮತದಾರರು ಗಮನಿಸಿದ್ದಾರೆ. ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ಈಗ ಜನರೇ ಕೊಟ್ಟಿದ್ದಾರೆ ಎಂದು ಹೇಳಿದರು.
ಸಂಸತ್ ಅಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಗದ್ದಲ ನಡೆಸಿ ಸದನ ಸ್ಥಗಿತಗೊಳಿಸುವುದನ್ನು ಕಾಂಗ್ರೆಸ್ ಇನ್ನಾದರೂ ನಿಲ್ಲಿಸಲಿ. ಬದಲಿಗೆ ಒಂದು ರಚನಾತ್ಮಕ ವಿಪಕ್ಷವಾಗಿ ಚರ್ಚೆ ನಡೆಸುವತ್ತ ಗಮನ ಹರಿಸಲಿ ಎಂದು ಹೇಳಿದರು.