ಹುಬ್ಬಳ್ಳಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ವಾಕ್ಸಮರಕ್ಕೆ ಸಂಬಂಧಿಸಿದಂತೆ ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದು, ಎಡಿಜಿಪಿ ಚಂದ್ರಶೇಖರ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದಾರೆ.
ತಮ್ಮ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಗರಂ ಆಗಿದ್ದ ಎಡಿಜಿಪಿ ಚಂದ್ರಶೇಖರ್, ಹೆಚ್.ಡಿ.ಕೆಯವರನ್ನು ಪರೋಕ್ಷವಾಗಿ ಹಂದಿಗೆ ಹೋಲಿಸಿ ಕೌಂಟರ್ ಕೂಟ್ಟಿದ್ದರು. ಇದೀಗ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.
ಎಡಿಜಿಪಿ ಚಂದ್ರಶೇಖರ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಅಧಿಕಾರಿಯಾದವರು ಗೌರವಯುತ ಪದ ಬಳಕೆ ಮಾಡುವುದು ಕರ್ತವ್ಯ. ನಾನು ನೋಡಿದಂತೆ ಹೆಚ್.ಡಿ.ಕೆ ಏಕವಚನದಲ್ಲಿ ಮಾತನಾಡುವವರಲ್ಲ. ಆದರೆ ಅಧಿಕಾರಿ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇದು ಅಧಿಕಾರಿಯ ಅಹಂಕಾರದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗೆ ಜ್ಞಾನವಿದ್ದರೆ ಮೊದಲು ಕ್ಷಮೆಯಾಚಿಸಲಿ. ಕೇಡರ್ ಕಂಟ್ರೋಲ್ ನಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಒಬ್ಬ ಅಧಿಕಾರಿಯ ಪತ್ರ ಕಾಂಗ್ರೆಸ್ ಗೆ ಮುಳುವಾಗಲಿದೆ. ಈ ಸರ್ಕಾರ ಖಾಯಂ ಎಂಬ ಭ್ರಮೆಯಲ್ಲಿದ್ದರೆ ಬೆಲೆ ತೆರಬೇಕಾಗುತ್ತದೆ. ಅತ್ಯಂತ ಕೆಟ್ಟ ಭಾಷೆ ಬಳಸಿರುವುದು ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ ಎಂದು ಕಿಡಿಕಾರಿದ್ದಾರೆ.