ಸಂಡೂರು: ಕಾಂಗ್ರೆಸ್ ನಾಯಕರು ಅಷ್ಟು ಸತ್ಯವಂತರಾಗಿದ್ದರೆ ಗ್ಯಾರಂಟಿ ಯೋಜನೆಗಳ ಬಗ್ಗೆ ರಾಜ್ಯ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಸಂಡೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಹ್ಲಾದ್ ಜೋಶಿ, ರಾಜ್ಯ ಸರ್ಕಾರದ್ದು ಎಲ್ಲಾ ಬೋಗಸ್ ಗ್ಯಾರೆಂಟಿಗಳು. ಈ ಸರ್ಕಾರ ಒಂದೆಡೆ ಕೊಟ್ಟು, ಮತ್ತೊಂದಲ್ಲಿ ಅದರ ಹತ್ತರಷ್ಟು ಕಿತ್ತುಕೊಳ್ಳುತ್ತಿದೆ. ಪೆಟ್ರೋಲ್, ಡೀಸೆಲ್, ಬಸ್ ಪ್ರಯಾಣ ದರ, ವಿದ್ಯುತ್ ದರ, ಹಾಲಿನ ದರ, ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ, ರೈತರ ಪಹಣಿ ಶುಲ್ಕ ಹೀಗೆ ಎಲ್ಲದರಲ್ಲೂ ಬೆಲೆ ಏರಿಕೆ ಹೊರೆ ಹೊರಿಸಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಷ್ಟು ಜನರಿಗೆ ತಲುಪಿವೆ? ಅದರ ಆದಾಯದ ಮೂಲ, ವೆಚ್ಚ ಸಮಗ್ರ ಮಾಹಿತಿಯುಳ್ಳ ಶ್ವೇತ ಪತ್ರ ಹೊರಡಿಸಲಿ ಎಂದರು.
ಗೃಹಲಕ್ಷ್ಮಿ ಹಣ ಎಷ್ಟು ಜನರಿಗೆ ತಲುಪಿದೆ? ಇದರಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಶಕ್ತಿ ಯೋಜನೆ ಕೊಟ್ಟರೆ ಪೆಟ್ರೋಲ್, ಡೀಸೆಲ್, ಪ್ರಯಾಣ ದರ ಹೆಚ್ಚಿಸಿದ್ದಾರೆ. ಫ್ರೀ ವಿದ್ಯುತ್ ಘೋಷಿಸಿದಂತೆ ಇಲ್ಲ. ಅಲ್ಲದೇ, 3 ರೂ. ಯುನಿಟ್ ಇದ್ದ ವಿದ್ಯುತ್ ಶುಲ್ಕ ಈಗ 7.50 ರೂ.ಗೆ ಹೆಚ್ಚಿಸಿದ್ದಾರೆ.
ಯುವನಿಧಿ ಒಬ್ಬರಿಗೂ ಇಲ್ಲ, ಹತ್ತರಲ್ಲೊಬ್ಬರಿಗೂ ತಲುಪಿಲ್ಲ. 2023-24ರ ಎಷ್ಟು ಪದವೀಧರರಿಗೆ ಯುವ ನಿಧಿ ಕೊಟ್ಟಿದ್ದೀರಿ? ಎಂದು ಪ್ರಶ್ನಿಸಿದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ 70-80 ಸಾವಿರ ಕೋಟಿ ರೂಪಾಯಿ ಸಾಲದ ಹೊರೆ ಹೊತ್ತಿದೆ. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮೂಲಕ ಅದನ್ನು ಸರಿದೂಗಿಸಲು ಹೆಣಗಾಡುತ್ತಿದೆ ಎಂದು ಆರೋಪಿಸಿದರು.
17 ಬಾರಿ ಬಜೆಟ್ ಮಂಡಿಸಿದ್ದಾಗಿ ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ ದೇಶದ ಆರ್ಥಿಕತೆ ಬಗ್ಗೆ ಹುಂಬತನದಿಂದ ಮಾತನಾಡುತ್ತಾರೆ ಎಂದು ಟೀಕಿಸಿದರು. ಜಗತ್ತಿನಲ್ಲೇ ಭಾರತದ ಆರ್ಥಿಕತೆ ಅತ್ಯಂತ ಸುಸ್ಥಿರವಾಗಿದೆ. ಕೋವಿಡ್ ಬಳಿಕ ಎಲ್ಲಾ ದೇಶಗಳು ಆರ್ಥಿಕ ಜರ್ಝರಿತ ಕಂಡರೆ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದೆ ಎಂದರು.
ಭಾರತ 700 ಮಿಲಿಯನ್ ಡಾಲರ್ ವಿದೇಶಿ ವಿನಿಮಯ ದಾಖಲಿಸಿದೆ. 75 ವರ್ಷದ ಇತಿಹಾಸದಲ್ಲಿ ಇದು ದಾಖಲೆಯಾಗಿದೆ ಎನ್ನುತ್ತ ಭಾರತದ ಆರ್ಥಿಕ ಸುಸ್ಥಿರತೆ ಬಗ್ಗೆ ಸಮರ್ಥನೆ ನೀಡಿದರು.