ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ಪಿಪಿಇ ಕಿಟ್ ಖರೀದಿ ಹಗರಣ ಸಂಬಂಧ ತನಿಖಾ ವರದಿ ನೀಡಿರುವ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ.ಕುನ್ಹಾ ಅವರನ್ನು ಅವಹೇಳನ ಮಾಡಿದ ಆರೋಪದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಲಾಗಿದೆ.
ಕಾಂಗ್ರೆಸ್ ನಾಯಕರ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ದೂರು ಸಲ್ಲಿಸಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ನೇತೃತ್ವದ ನಿಯೋಗದಿಂದ ದೂರು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡುರಾವ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನ್ಯಾ.ಮೈಕೆಲ್ ಕುನ್ಹಾ ಅವರ ತನಿಖಾ ಆಯೋಗದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಕುನ್ಹಾ ನ್ಯಾಯಾಧೀಶರಲ್ಲ, ಪೊಲಿಟಿಕಲ್ ಏಜೆಂಟ್ ಎಂದು ಜರಿದಿದ್ದಾರೆ. ಅಲ್ಲದೇ ದುರುದ್ದೇಶದಿಂದ ಹಾಗೂ ಚುನಾವಣಾ ದೃಷ್ಟಿಯಿಟ್ಟುಕೊಂಡು ಕುನ್ಹಾ ವರದಿ ನೀಡಿದ್ದಾರೆ ಎಂದಿದ್ದಾರೆ. ಕೇಂದ್ರ ಸಚಿವರಾಗಿರುವ ಜೋಶಿ ಈರೀತಿ ತನಿಖಾ ಆಯೋಗದ ಬಗ್ಗೆ ಮಾತನಾಡುವುದು ಕಾನೂನು ಬಾಹಿರ. ನ್ಯಾಯಾಂಗ ತನಿಖಾ ಆಯೋಗದ ವಿರುದ್ಧ ಸಂಶಯ ವ್ಯಕ್ತಪಡಿಸಿರುವುದು ಸರಿಯಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ. ಹಾಗಾಗಿ ಜೋಶಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಡಿದ್ದೇವೆ ಎಂದು ತಿಳಿಸಿದರು.